ADVERTISEMENT

ಕೋವಿಡ್‌ ಲಸಿಕೆ: ದೆಹಲಿಯಲ್ಲಿ ‘ಹರ್‌ ಘರ್‌ ದಸ್ತಕ್‌’ ಅಭಿಯಾನ ಶುರು

ಪಿಟಿಐ
Published 12 ನವೆಂಬರ್ 2021, 11:16 IST
Last Updated 12 ನವೆಂಬರ್ 2021, 11:16 IST
ಕೋವಿಡ್‌ ಲಸಿಕೆ ಹಾಕಿಸಿಕೊಳ್ಳುತ್ತಿರುವ ಯುವತಿ (ಸಾಂದರ್ಭಿಕ ಚಿತ್ರ)
ಕೋವಿಡ್‌ ಲಸಿಕೆ ಹಾಕಿಸಿಕೊಳ್ಳುತ್ತಿರುವ ಯುವತಿ (ಸಾಂದರ್ಭಿಕ ಚಿತ್ರ)   

ನವದೆಹಲಿ: ಇನ್ನೂ ಕೋವಿಡ್‌ ಲಸಿಕೆ ಹಾಕಿಸಿಕೊಳ್ಳದ ಮತ್ತು ಎರಡನೇ ಡೋಸ್‌ ತೆಗೆದುಕೊಳ್ಳಬೇಕಾದ ಅವಧಿ ಮೀರಿರುವ ಜನರಿಗೆ ಮನೆ ಮನೆಗೆ ಹುಡುಕಿಕೊಂಡು ಹೋಗಿ ಲಸಿಕೆ ಹಾಕುವ ‘ಹರ್‌ ಘರ್‌ ದಸ್ತಕ್‌’ ಅಭಿಯಾನಕ್ಕೆ ಶುಕ್ರವಾರ ರಾಷ್ಟ್ರ ರಾಜಧಾನಿಯಲ್ಲಿ ಚಾಲನೆ ದೊರೆತಿದೆ.

ಲಸಿಕೆ ಹಾಕಿಸಿಕೊಳ್ಳುವುದರಿಂದ ಯಾರೊಬ್ಬರೂ ಹೊರಗುಳಿಯದಂತೆ ನೋಡಿಕೊಳ್ಳಲು ಕೇಂದ್ರ ಸರ್ಕಾರ ಇತ್ತೀಚೆಗೆ ಒಂದು ತಿಂಗಳ ಅವಧಿಯ ‘ಹರ್ ಘರ್ ದಸ್ತಕ್’ ಅಭಿಯಾನ ಪ್ರಾರಂಭಿಸಿದೆ.

ದೆಹಲಿ ಸರ್ಕಾರ ಹೊರಡಿಸಿರುವ ಪ್ರಕಟಣೆಯ ಪ್ರಕಾರ, ನವೆಂಬರ್ 12ರಿಂದ 27ರವರೆಗೆ ಈ ಅಭಿಯಾನ ನಡೆಯಲಿದೆ. ಮೊದಲ ಅಥವಾ ಎರಡನೇ ಡೋಸ್‌ ಲಸಿಕೆ ಪಡೆಯುವವರಿಗೆ ‘ವಾಕ್-ಇನ್ ವ್ಯಾಕ್ಸಿನೇಷನ್’ ಸೌಲಭ್ಯವು ಎಲ್ಲಾ ಕೇಂದ್ರಗಳಲ್ಲಿ ಲಭ್ಯವಿರಲಿದೆ. ಇದಕ್ಕಾಗಿ ಯಾವುದೇ ಪೂರ್ವ ನೋಂದಣಿಯ ಅಗತ್ಯವಿಲ್ಲ.

ADVERTISEMENT

ಆರೋಗ್ಯ ಇಲಾಖೆಯ ಮಾಹಿತಿಯ ಪ್ರಕಾರ, ದೆಹಲಿಯಲ್ಲಿ ಈವರೆಗೆ ಎರಡು ಕೋಟಿಗೂ ಹೆಚ್ಚು ಡೋಸ್‌ ಲಸಿಕೆ ನೀಡಲಾಗಿದೆ. ಇದರಲ್ಲಿ 77 ಲಕ್ಷಕ್ಕೂ ಹೆಚ್ಚು ಜನರು ಎರಡು ಡೋಸ್‌ ಲಸಿಕೆಗಳನ್ನು ಪಡೆದುಕೊಂಡಿದ್ದಾರೆ.

ಹೆಚ್ಚಿನ ಸಂಖ್ಯೆಯ ಜನರು ಈಗಾಗಲೇ ಕೋವಿಡ್‌ ಸೋಂಕಿಗೆ ಒಳಗಾಗಿರುವುದರಿಂದ ಮತ್ತುಲಸಿಕೆ ವೇಗದಲ್ಲಿ ಸ್ಥಿರತೆ ಇರುವುದರಿಂದ ದೆಹಲಿಯಲ್ಲಿ ಸುಮಾರು ಮೂರೂವರೆ ತಿಂಗಳಿನಿಂದ ದೈನಂದಿನ ಪ್ರಕರಣಗಳು 100ರ ಗಡಿ ದಾಟಿಲ್ಲ ಎಂದು ತಜ್ಞರು ಹೇಳಿದ್ದಾರೆ.

ಎರಡು ಡೋಸ್‌ಗಳ ನಡುವಿನ ನಿಗದಿತ ಮಧ್ಯಂತರದ ಅವಧಿ ಮುಗಿದ ನಂತರ ಲಸಿಕೆ ಪಡೆದಿರದ ಫಲಾನುಭವಿಗಳಿಗೆ ಎರಡನೇ ಡೋಸ್ ಅನ್ನು ಆದ್ಯತೆ ಮೇಲೆ ನೀಡುವಂತೆ ಕೇಂದ್ರ ಆರೋಗ್ಯ ಸಚಿವಾಲಯವು ಇತ್ತೀಚೆಗೆ ಹಲವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಪತ್ರ ಬರೆದಿದೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.