ADVERTISEMENT

ಕೋವಿಡ್: ಮಹಾರಾಷ್ಟ್ರ, ಕರ್ನಾಟಕ ಸೇರಿ 6 ರಾಜ್ಯಗಳಲ್ಲಿ ಶೇ 85ರಷ್ಟು ಹೊಸ ಪ್ರಕರಣ

ಕೇಂದ್ರ ಆರೋಗ್ಯ ಸಚಿವಾಲಯ

ಪಿಟಿಐ
Published 12 ಮಾರ್ಚ್ 2021, 17:16 IST
Last Updated 12 ಮಾರ್ಚ್ 2021, 17:16 IST
ಮುಂಬೈನಲ್ಲಿ ಕೋವಿಡ್‌ ಲಸಿಕೆ ಪಡೆಯುತ್ತಿರುವ ಆರೋಗ್ಯ ಕಾರ್ಯಕರ್ತೆ
ಮುಂಬೈನಲ್ಲಿ ಕೋವಿಡ್‌ ಲಸಿಕೆ ಪಡೆಯುತ್ತಿರುವ ಆರೋಗ್ಯ ಕಾರ್ಯಕರ್ತೆ   

ನವದೆಹಲಿ: ದೇಶದ ಆರು ರಾಜ್ಯಗಳಲ್ಲಿ ಕೋವಿಡ್‌–19 ದೃಢಪಟ್ಟ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದ್ದು, ಶೇ 85.6ರಷ್ಟು ಹೊಸ ಪ್ರಕರಣಗಳು ಆರು ರಾಜ್ಯಗಳಿಂದಲೇ ದಾಖಲಾಗಿವೆ. ಮಹಾರಾಷ್ಟ್ರ, ಕೇರಳ, ಪಂಜಾಬ್‌, ಕರ್ನಾಟಕ, ಗುಜರಾತ್‌ ಹಾಗೂ ತಮಿಳುನಾಡನಲ್ಲಿ ಕೊರೊನಾ ವೈರಸ್‌ ಸೊಂಕು ಪ್ರಕರಣಗಳು ಹೆಚ್ಚುತ್ತಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಶುಕ್ರವಾರ ಪ್ರಕಟಿಸಿದೆ.

ಪ್ರಸ್ತುತ ದೇಶದಲ್ಲಿ 1,97,237 ಕೋವಿಡ್‌ ಪ್ರಕರಣಗಳು ಸಕ್ರಿಯವಾಗಿವೆ. ಒಟ್ಟು ಪ್ರಕರಣಗಳ ಪೈಕಿ ಸಕ್ರಿಯ ಪ್ರಕರಣಗಳು ಶೇ 1.74ರಷ್ಟಾಗಿದೆ.

ಮಹಾರಾಷ್ಟ್ರ ಮತ್ತು ಕೇರಳದಲ್ಲೇ ಒಟ್ಟು ಕೋವಿಡ್‌ ಸಕ್ರಿಯ ಪ್ರಕರಣಗಳ ಪೈಕಿ ಶೇ 71.69 ಪ್ರಕರಣಗಳಿವೆ. ಐದು ರಾಜ್ಯಗಳಲ್ಲಿ ಶೇ 82.96 ಸಕ್ರಿಯ ಪ್ರಕರಣಗಳಿರುವುದಾಗಿ ಸಚಿವಾಲಯ ತಿಳಿಸಿದೆ.

ADVERTISEMENT

ಶುಕ್ರವಾರ ಕೋವಿಡ್‌ ದೃಢಪಟ್ಟ 23,285 ಹೊಸ ಪ್ರಕರಣಗಳು ದಾಖಲಾಗಿವೆ. ಮಹಾರಾಷ್ಟ್ರ ಒಂದರಲ್ಲಿಯೇ 14,317 ಪ್ರಕರಣಗಳು (ಹೊಸ ಪ್ರಕರಣಗಳ ಪೈಕಿ ಶೇ 61.48) ವರದಿಯಾಗಿದೆ. ಕೇರಳದಲ್ಲಿ 2,133, ಪಂಜಾಬ್‌ನಲ್ಲಿ 1,305 ಹೊಸ ಪ್ರಕರಣಗಳು ದಾಖಲಾಗಿವೆ. ಇದೇ ಅವಧಿಯಲ್ಲಿ 15,157 ಮಂದಿ ಗುಣಮುಖರಾಗಿದ್ದರೆ, 117 ಜನ ಸಾವಿಗೀಡಾಗಿದ್ದಾರೆ.

ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು 57 ಜನ ಮೃತಪಟ್ಟರೆ, ಪಂಜಾಬ್‌ನಲ್ಲಿ 18, ಕೇರಳದಲ್ಲಿ 13 ಮಂದಿ ಸಾವಿಗೀಡಾಗಿದ್ದಾರೆ. ಸೋಂಕಿನಿಂದ 24 ಗಂಟೆಗಳಲ್ಲಿ ಸಾವಿಗೀಡಾದ ಶೇ 82.91 ಪ್ರಕರಣಗಳು ಆರು ರಾಜ್ಯಗಳಿಂದಲೇ ವರದಿಯಾಗಿವೆ. ಗುಜರಾತ್‌, ರಾಜಸ್ಥಾನ, ಬಿಹಾರ, ಅರುಣಾಚಲ ಪ್ರದೇಶ ಸೇರಿದಂತೆ 19 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಕೋವಿಡ್‌ನಿಂದ ಸಾವಿಗೀಡಾದ ಪ್ರಕರಣಗಳು ವರದಿಯಾಗಿಲ್ಲ.

ಕೋವಿಡ್‌–19 ನಿಯಂತ್ರಿಸುವ ಸಲುವಾಗಿ ಅಗತ್ಯ ಕ್ರಮಗಳನ್ನು ಜಾರಿಗೊಳಿಸಲು ಅನುವಾಗುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಉನ್ನತ ಮಟ್ಟದ ತಜ್ಞರ ತಂಡಗಳನ್ನು ಮಹಾರಾಷ್ಟ್ರ ಹಾಗೂ ಪಂಜಾಬ್‌ಗೆ ಕಳುಹಿಸಿದೆ.

ಶುಕ್ರವಾರ ಬೆಳಗಿನ ವರೆಗೂ ಒಟ್ಟು 2.61 ಕೋಟಿಗೂ ಹೆಚ್ಚು ಡೋಸ್‌ಗಳಷ್ಟು ಲಸಿಕೆಯನ್ನು ಜನರಿಗೆ ಹಾಕಲಾಗಿದೆ. 60 ವರ್ಷ ವಯಸ್ಸಿಗಿಂತ ಮೇಲ್ಪಟ್ಟ 60,61,034 ಜನರಿಗೆ ಮೊದಲ ಡೋಸ್‌ ಲಸಿಕೆ ಹಾಕಲಾಗಿದೆ, 45 ವರ್ಷ ದಾಟಿರುವ 10,30,612 ಜನರು ಲಸಿಕೆ ಹಾಕಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.