ADVERTISEMENT

ಮಾಲ್ಡೀವ್ಸ್‌ನಲ್ಲಿ ಸಮುದ್ರ ಸೇತು: ಭಾರತೀಯರನ್ನು ಹೊತ್ತು ಬರಲಿದೆ ಐಎನ್ಎಸ್ ಜಲಾಶ್ವ

ಏಜೆನ್ಸೀಸ್
Published 8 ಮೇ 2020, 6:55 IST
Last Updated 8 ಮೇ 2020, 6:55 IST
ಭಾರತೀಯ ನೌಕಾಪಡೆಯ ಐಎನ್‌ಎಸ್‌ ಜಲಾಶ್ವ
ಭಾರತೀಯ ನೌಕಾಪಡೆಯ ಐಎನ್‌ಎಸ್‌ ಜಲಾಶ್ವ   
""

ಮಾಲೆ: ಕೋವಿಡ್‌–19 ಲಾಕ್‌ಡೌನ್‌ನಿಂದಾಗಿ ಮಾಲ್ಡೀವ್ಸ್‌ನಲ್ಲಿ ಸಿಲುಕಿರುವ ಭಾರತೀಯರನ್ನು ಕರೆತರಲು ನೌಕಾಪಡೆ 'ಸಮುದ್ರ ಸೇತು' ಕಾರ್ಯಾಚರಣೆಯಡಿ ಎರಡು ಹಡಗುಗಳನ್ನು ಕಳುಹಿಸಿದೆ. ಈಗಾಗಲೇ ಮಾಲ್ಡೀವ್ಸ್‌ನ ಮಾಲೆ ಬಂದರು ತಲುಪಿರುವ ಹಡಗು ಅಂತಿಮ ಹಂತದ ಸಿದ್ಧತೆ ನಡೆಸಿದೆ.

ಮುಂಬೈ ಕರಾವಳಿಯಿಂದ ಐಎನ್‌ಎಸ್‌ ಜಲಾಶ್ವ ಮತ್ತು ಐಎನ್‌ಎಸ್‌ ಮಗರ್‌ ಮಾಲ್ಡೀವ್ಸ್‌ ಕಳುಹಿಸಲಾಗಿದೆ. ಎರಡೂ ಹಡಗುಗಳು ನೂರಾರು ಭಾರತೀಯರನ್ನು ಹೊತ್ತು ಕೇರಳದ ಕೊಚ್ಚಿಗೆ ಆಗಮಿಸಲಿವೆ.

ಗುರುವಾರ ಐಎನ್‌ಎಸ್ ಜಲಾಶ್ವ ಮಾಲೆ ಬಂದರು ತಲುಪಿದ್ದು, ಮೊದಲ ಹಂತವಾಗಿ ಇಂದು ಜನರೊಂದಿಗೆ ಭಾರತದತ್ತ ಮರಳಲಿದೆ. ಭಾರತೀಯರು ಬಂದರಿನತ್ತ ಬಂದು ಅಗತ್ಯ ಪರೀಕ್ಷೆಗಳಿಗೆ ಒಳಗಾಗಿದ್ದಾರೆ. ಹೊರಡುವುದಕ್ಕೂ ಮುನ್ನ ಪೂರೈಸಬೇಕಾದ ಪ್ರಕ್ರಿಯೆಗಳು ಮಾಲ್ಡೀವ್ಸ್‌ನಲ್ಲಿ ಭಾರತೀಯ ಹೈಕಮಿಷನ್‌ ಆರಂಭಿಸಿದೆ.

ADVERTISEMENT

ಆಮರೇಷನ್‌ ಸಮುದ್ರ ಸೇತು ಅಡಿಯಲ್ಲಿ ಮಾಲ್ಡೀವ್ಸ್‌ನಿಂದ ಭಾರತೀಯರನ್ನು ಕರೆದೊಯ್ಯಲು ಸಹಕಾರಿಯಾಗಲು ಹೈಕಮಿಷನ್‌ನ ಅಧಿಕಾರಿಗಳು ಹಾಗೂ ಸ್ವಯಂ ಸೇವಕರು ಕಾರ್ಯಾಚರಣೆಯಲ್ಲಿ ನಿರತರಾಗಿದ್ದಾರೆ. ರಕ್ಷಣಾ ಕವಚಗಳನ್ನು ಧರಿಸಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಐಎನ್‌ಎಸ್‌ ಜಲಾಶ್ವದಲ್ಲಿ ನೌಕಾಪಡೆಯ ಸಿಬ್ಬಂದಿ ಕುರ್ಚಿ, ಹಾಸಿಗೆ, ಆರೋಗ್ಯ ತಪಾಸಣೆ ಸೇರಿದಂತೆ ಅಗತ್ಯವಿರುವ ಎಲ್ಲ ವ್ಯವಸ್ಥೆಯೊಂದಿಗೆ ಸಜ್ಜಾಗಿದ್ದಾರೆ.

ಮೊದಲ ಹಂತದಲ್ಲಿ ಸುಮಾರು 1,000 ಜನರನ್ನು ಕರೆದೊಯ್ಯುವ ಯೋಜನೆ ಇದೆ.

ಐಎನ್‌ಎಸ್‌ ಜಲಾಶ್ವದಲ್ಲಿ ಸಂಚರಿಸಲಿರುವ ಭಾರತೀಯರಿಗೆ ಮಾಲ್ಡೀವ್‌ನ 600 ರುಫೀಯಾ ಅಥವಾ 40 ಅಮೆರಿಕನ್‌ ಡಾಲರ್ (ಸುಮಾರು ₹3,000)‌ ಶುಲ್ಕ ವಿಧಿಸುತ್ತಿರುವುದಾಗಿ ಮಾಲ್ಡೀವ್ಸ್‌ನಲ್ಲಿನ ಭಾರತೀಯ ಹೈಕಮಿಷನ್‌ ಹೇಳಿದೆ.

ಇನ್ನೂ ಅಬು ಧಾಬಿಯಿಂದ ಭಾರತೀಯರನ್ನು ಕರೆತರಲು ತೆರಳಿದ್ದ ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ನ ಮೊದಲ ವಿಮಾನ 177 ಪ್ರಯಾಣಿಕರೊಂದಿಗೆ ಗುರುವಾರ ರಾತ್ರಿ 10 ಗಂಟೆಗೆ ಕೊಚ್ಚಿ ವಿಮಾನ ನಿಲ್ದಾಣಕ್ಕೆ ಬಂದಿಳಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.