ADVERTISEMENT

ಕೋವಿಡ್‌–19: ದೇಶದಲ್ಲಿ ಸೋಂಕಿತರ ಚೇತರಿಕೆ ಪ್ರಮಾಣ ಶೇ 63.33ಕ್ಕೆ ಏರಿಕೆ

ಪಿಟಿಐ
Published 17 ಜುಲೈ 2020, 14:01 IST
Last Updated 17 ಜುಲೈ 2020, 14:01 IST
ಕೊರೊನಾ ವೈರಸ್ ಸೋಂಕು ಪರೀಕ್ಷೆ–ಪ್ರಾತಿನಿಧಿಕ ಚಿತ್ರ
ಕೊರೊನಾ ವೈರಸ್ ಸೋಂಕು ಪರೀಕ್ಷೆ–ಪ್ರಾತಿನಿಧಿಕ ಚಿತ್ರ   

ನವದೆಹಲಿ: ಭಾರತದಲ್ಲಿ ಈವರೆಗೆ ಕೋವಿಡ್‌–19 ದೃಢಪಟ್ಟ ಪ್ರಕರಣಗಳ ಸಂಖ್ಯೆ 10 ಲಕ್ಷ ದಾಟಿದೆ. ಆದರೆ, ಸೋಂಕಿನಿಂದ 6.35 ಲಕ್ಷಕ್ಕೂ ಹೆಚ್ಚು ಜನರು ಚೇತರಿಸಿಕೊಂಡಿರುವುದು ಗಮನಾರ್ಹ ಅಂಶ.

ದೇಶದಲ್ಲಿ ಪ್ರಸ್ತುತ 3.42 ಲಕ್ಷ ಕೋವಿಡ್‌ ಸಕ್ರಿಯ ಪ್ರಕರಣಗಳಿದ್ದು, ಆ ಪೈಕಿ ಶೇ 1.94ಕ್ಕಿಂತಲೂ ಕಡಿಮೆ ಪ್ರಕರಣಗಳಲ್ಲಿ ಐಸಿಯುಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸೋಂಕಿತರ ಪೈಕಿ ಶೇ 0.35ರಷ್ಟು ಜನರಿಗೆ ವೆಂಟಿಲೇಟರ್‌ ಅಗತ್ಯವಾಗಿದೆ ಹಾಗೂ ಶೇ 2.81ರಷ್ಟು ಪ್ರಕರಣಗಳಲ್ಲಿ ಆಕ್ಸಿಜನ್‌ ನೀಡಲಾಗುತ್ತಿದೆ. ಇದರೊಂದಿಗೆ ಗುಣಮುಖರಾಗುವ ಪ್ರಮಾಣ ಶೇ 63.33ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಶುಕ್ರವಾರ ಹೇಳಿದೆ.

135 ಕೋಟಿ ಜನಸಂಖ್ಯೆ ಹೊಂದಿರುವ ಭಾರತದಲ್ಲಿ ಪ್ರತಿ 10 ಲಕ್ಷ ಜನರ ಪೈಕಿ 727.4 ಕೋವಿಡ್‌ ಪ್ರಕರಣಗಳು ದಾಖಲಾಗಿವೆ. ಯುರೋಪಿಯನ್‌ ರಾಷ್ಟ್ರಗಳಿಗೆ ಹೋಲಿಸಿದರೆ ಈ ಪ್ರಮಾಣ ನಾಲ್ಕರಿಂದ ಎಂಟು ಪಟ್ಟು ಕಡಿಮೆ ಇದೆ ಹಾಗೂ ಕೋವಿಡ್‌ನಿಂದ ಪ್ರತಿ 10 ಲಕ್ಷ ಜನರಲ್ಲಿ 18.6 ಮಂದಿ ಸಾವಿಗೀಡಾಗಿದ್ದಾರೆ. ಈ ಪ್ರಮಾಣ ಜಗತ್ತಿನಲ್ಲೇ ಅತಿ ಕಡಿಮೆ ಇರುವುದಾಗಿ ಆರೋಗ್ಯ ಸಚಿವಾಲಯ ಹೇಳಿದೆ.

ADVERTISEMENT

ದೇಶದಲ್ಲಿ 1,383 ಕೋವಿಡ್‌ ಆಸ್ಪತ್ರೆಗಳು, 3,107 ಕೋವಿಡ್‌ ಆರೋಗ್ಯ ಕೇಂದ್ರಗಳು ಹಾಗೂ 10,382 ಕೋವಿಡ್‌ ಆರೈಕೆ ಕೇಂದ್ರಗಳಲ್ಲಿ ಒಟ್ಟು 46,673 ಐಸಿಯು ಬೆಡ್‌ಗಳ ವ್ಯವಸ್ಥೆ ಇದೆ. ದೇಶದಾದ್ಯಂತ ಆಸ್ಪತ್ರೆಗಳಲ್ಲಿ 21,848 ವೆಂಟಿಲೇಟರ್‌ಗಳ ವ್ಯವಸ್ಥೆ ಮಾಡಲಾಗಿದೆ.

ಕೇಂದ್ರ ಸರ್ಕಾರದಿಂದ 235.58 ಲಕ್ಷ ಎನ್95 ಮಾಸ್ಕ್‌ಗಳು ಹಾಗೂ 124.26 ಲಕ್ಷ ಪಿಪಿಇ ಕಿಟ್‌ಗಳನ್ನು ರಾಜ್ಯ, ಕೇಂದ್ರಾಡಳಿ ಪ್ರದೇಶ ಹಾಗೂ ಕೇಂದ್ರೀಯ ಸಂಸ್ಥೆಗಳಿಗೆ ತಲುಪಿಸಲಾಗಿದೆ ಎಂದು ಸಚಿವಾಲಯ ತಿಳಿಸಿದೆ.

ಶುಕ್ರವಾರ ದೇಶದಲ್ಲಿ ಕೋವಿಡ್‌–19 ದೃಢಪಟ್ಟ 34,956 ಹೊಸ ಪ್ರಕರಣಗಳು ದಾಖಲಾಗಿವೆ.

ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಮನೆ ಮನೆಗೂ ತೆರಳಿ ಸಮೀಕ್ಷೆ ನಡೆಸುತ್ತಿರುವುದು, ಸಂಪರ್ಕ ಪತ್ತೆ ಕಾರ್ಯ, ಕಂಟೈನ್‌ಮೆಂಟ್‌ ಮತ್ತು ಬಫರ್‌ ವಲಯಗಳಲ್ಲಿ ನಿಗಾವಹಿಸಿರುವುದು, ಹೆಚ್ಚೆಚ್ಚು ಗಂಟಲು ದ್ರವ ಪರೀಕ್ಷೆ ನಡೆಸುವ ಮೂಲಕ ಬಹುಬೇಗ ಚಿಕಿತ್ಸೆಗೆ ಒಳಪಡಿಸುವ ಅವಕಾಶ ಸಿಗುತ್ತಿದೆ. ಸೋಂಕು ಪ್ರಾರಂಭಿಕ ಲಕ್ಷಣಗಳನ್ನು ಹೊಂದಿರದ ಶೇ 80ರಷ್ಟು ಹಾಗೂ ಅಲ್ಪ ಮಟ್ಟದ ಸೋಂಕು ಲಕ್ಷಣಗಳು ಕಂಡು ಬಂದಿರುವವರಿಗೆ ವೈದ್ಯಕೀಯ ಸಲಹೆ ಮೇರೆಗೆ ಮನೆಯಲ್ಲಿಯೇ ಪ್ರತ್ಯೇಕವಾಗಿರುವಂತೆ ಸಲಹೆ ನೀಡಲಾಗಿದೆ ಎಂದು ಸಚಿವಾಲಯ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.