
ಸಿಪಿಎಂ ಹಾಗೂ ಕಾಂಗ್ರೆಸ್
ನವದೆಹಲಿ: ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಹಾಗೂ ಬಿಜೆಪಿಯನ್ನು ಸೋಲಿಸಲು ಕಾಂಗ್ರೆಸ್ ಜೊತೆಗೆ ಮೈತ್ರಿಗೆ ಸಿದ್ಧ ಎಂದು ಸಿಪಿಐ (ಎಂ) ಹೇಳಿದೆ.
ಅಲ್ಲದೆ ತಮಿಳುನಾಡಿನಲ್ಲಿ ಬಿಜೆಪಿ ಹಾಗೂ ಮಿತ್ರಪಕ್ಷಗಳನ್ನು ಮಣಿಸಲು ಡಿಎಂಕೆ ಹಾಗೂ ಮಿತ್ರಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡು ಸ್ಪರ್ಧಿಸಲಿದೆ ಎಂದು ಹೇಳಿದೆ. ಅಸ್ಸಾಂ ಹಾಗೂ ಪುದುಚೇರಿಯಲ್ಲಿ ಬಿಜೆಪಿಯನ್ನು ಸೋಲಿಸಲು ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಳ್ಳುವ ಉತ್ಸಾಹವನ್ನು ಸಿಪಿಎಂ ತೋರಿದೆ.
ತಿರುವನಂತಪುರದಲ್ಲಿ ನಡೆದ ಸಿಪಿಎಂ ಕೇಂದ್ರ ಸಮಿತಿ ಸಭೆಯಲ್ಲಿ ಚುನಾವಣೆ ನಡೆಯಲಿರುವ ರಾಜ್ಯಗಳ ಬಗ್ಗೆ ಚರ್ಚಿಸಿ ಈ ನಿರ್ಧಾರಕ್ಕೆ ಬರಲಾಗಿದೆ.
ಸಿಪಿಎಂ ಜೊತೆಗೆ ಮೈತ್ರಿ ಮಾಡಿಕೊಂಡರೆ ಯಾವುದೇ ಪ್ರಯೋಜನ ಇಲ್ಲ ಎಂದು ಪಶ್ಚಿಮ ಬಂಗಾಳದ ಕಾಂಗ್ರೆಸ್ ಅಧ್ಯಕ್ಷ ಶುಭಂಕರ್ ಸರ್ಕಾರ್ ಹೇಳಿದರೂ, ಒಪ್ಪಂದಕ್ಕೆ ಸಿಪಿಎಂ ಮುಂದಾಗಿದೆ. 2016 ಹಾಗೂ 2021ವಿಧಾನಸಭೆ ಚುನಾವಣೆ ಹಾಗೂ 2024 ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್–ಸಿಪಿಎಂ ಮೈತ್ರಿ ಮಾಡಿಕೊಂಡಿತ್ತು.
2016ರಲ್ಲಿ ಮೊದಲ ಬಾರಿ ಕಾಂಗ್ರೆಸ್ ಹಾಗೂ ಸಿಪಿಎಂ ಮೈತ್ರಿ ಮಾಡಿಕೊಂಡು ವಿಧಾನಸಭೆ ಚುನಾವಣೆ ಎದುರಿಸಿದ್ದವು. ಕಾಂಗ್ರೆಸ್ 44 ರಲ್ಲಿ ಹಾಗೂ ಸಿಪಿಎಂ 26 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದವು. 2021ರಲ್ಲಿ ಎರಡೂ ಪಕ್ಷಗಳು ಶೂನ್ಯ ಸಾಧಿಸಿದ್ದವು. 2024ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 1ರಲ್ಲಿ ಗೆದ್ದರೆ, ಸಿಪಿಎಂ ಶೂನ್ಯ ಸಂಪಾದಿಸಿತ್ತು.
‘ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಹಾಗೂ ಬಿಜೆಪಿಯನ್ನು ಸೋಲಿಸಲು ನಾವು ಕೆಲಸ ಮಾಡುತ್ತೇವೆ. ಆ ಪಕ್ಷಗಳು ಸಮಾಜದಲ್ಲಿ ಧ್ರುವೀಕರಣ ಉಂಟು ಮಾಡುತ್ತಿವೆ. ಎರಡೂ ಪಕ್ಷಗಳ ವಿರುದ್ಧ ಪೂರ್ಣ ಬಲದೊಂದಿಗೆ ಕೆಲಸ ಮಾಡುತ್ತೇವೆ’ ಎಂದು ಹಿರಿಯ ನಾಯಕರೊಬ್ಬರು ತಿಳಿಸಿದ್ದಾರೆ.
ಆದರೆ ಕೇರಳದಲ್ಲಿ ಕಾಂಗ್ರೆಸ್ ವಿರುದ್ಧವಾಗಿಯೇ ಸ್ಪರ್ಧಿಸುತ್ತೇವೆ ಎಂದು ಹೇಳಿದ್ದಾರೆ.
‘ಕೇರಳ ಸರ್ಕಾರಕ್ಕೆ ನ್ಯಾಯಯುತವಾಗಿ ಬರಬೇಕಿದ್ದ ಪಾಲನ್ನು ತಡೆದ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಅನ್ಯಾಯವನ್ನು ಬಯಲು ಮಾಡುತ್ತೇವೆ. ಇದು ಒಕ್ಕೂಟ ವ್ಯವಸ್ಥೆಗೆ ವಿರುದ್ಧ. ಕಾಂಗ್ರೆಸ್‌ನ ವೈಫಲ್ಯಗಳನ್ನೂ ಜನರ ಮುಂದಿಡುತ್ತೇವೆ ಎಂದು ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.