ADVERTISEMENT

ಖಾಸಗಿ ವಿಮೆ, ಔಷಧ ಕಂಪನಿಗಳಿಗೆ ವೈಯಕ್ತಿಕ ಮಾಹಿತಿ ನೀಡಬಾರದು: ಸಿಪಿಐಎಂ

ಏಜೆನ್ಸೀಸ್
Published 31 ಆಗಸ್ಟ್ 2020, 12:27 IST
Last Updated 31 ಆಗಸ್ಟ್ 2020, 12:27 IST
ಸೀತಾರಾಮ್ ಯೆಚೂರಿ
ಸೀತಾರಾಮ್ ಯೆಚೂರಿ   

ನವದೆಹಲಿ: ಪೂರ್ಣ ಪ್ರಮಾಣದ ಚರ್ಚೆಯಾಗದ ಹೊರತು ‘ಆರೋಗ್ಯ ದತ್ತಾಂಶ ನಿರ್ವಹಣಾ ನೀತಿ (ಎಚ್‌ಡಿಎಂಪಿ)’ ಮತ್ತು ‘ನ್ಯಾಷನಲ್ ಡಿಜಿಟಲ್ ಹೆಲ್ತ್ ಮಿಷನ್ (ಎನ್‌ಡಿಎಚ್‌ಎಂ)’ ಯೋಜನೆ ಜಾರಿಗೊಳಿಸಬಾರದು. ಯೋಜನೆಗಳನ್ನು ಮುಂದೂಡಬೇಕು ಎಂದು ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ಆಗ್ರಹಿಸಿದ್ದಾರೆ.

ಈ ಎರಡು ಯೋಜನೆಗಳು ಸೂಕ್ಷ್ಮ ವೈಯಕ್ತಿಕ ದತ್ತಾಂಶವನ್ನು ಖಾಸಗಿ ವಿಮೆ ಮತ್ತು ಔಷಧ ಕಂಪನಿಗೆಳಿಗೆ ನೀಡುವ ಪ್ರಸ್ತಾವ ಒಳಗೊಂಡಿವೆ. ಇದು ಗಂಭೀರ ವಿಚಾರವಾಗಿದೆ. ವೈಯಕ್ತಿಕ ದತ್ತಾಂಶವನ್ನು ಖಾಸಗಿ ಕಂಪನಿಗಳ ಲಾಭಕ್ಕೆ ಮೋದಿ ಸರ್ಕಾರ ನೀಡಬಾರದು ಎಂದು ಅವರು ಟ್ವೀಟ್ ಮಾಡಿದ್ದಾರೆ. ಈ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬರೆದ ಪತ್ರವನ್ನೂ ಟ್ವೀಟ್‌ ಜತೆ ಲಗತ್ತಿಸಿದ್ದಾರೆ.

‘ಎನ್‌ಡಿಎಚ್‌ಎಂ ಕುರಿತು ಅಭಿಪ್ರಾಯ ಸಲ್ಲಿಸಲು ವಿಧಿಸಿರುವ ಸೆಪ್ಟೆಂಬರ್ 3ರ ಗಡುವನ್ನು ವಿಸ್ತರಿಸಬೇಕು. ನೀತಿಯ ಗಂಭೀರ ಪರಿಣಾಮಗಳ ಬಗ್ಗೆ ರಚನಾತ್ಮಕ ಚರ್ಚೆ ನಡೆಯುವುದಕ್ಕೂ ಮುನ್ನವೇ ಅದನ್ನು ಅಂತಿಮಗೊಳಿಸಬಾರದು’ ಎಂದು ಪ್ರಧಾನಿಗೆ ಬರೆದ ಪತ್ರದಲ್ಲಿ ಯೆಚೂರಿ ಉಲ್ಲೇಖಿಸಿದ್ದಾರೆ.

ADVERTISEMENT

ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ದೇಶವನ್ನು ಉದ್ದೇಶಿಸಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ ಹೊಸ ‘ನ್ಯಾಷನಲ್ ಡಿಜಿಟಲ್ ಹೆಲ್ತ್ ಮಿಷನ್’ ಯೋಜನೆ ಘೋಷಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.