ADVERTISEMENT

ಸಿಪಿಎಂ ಚುನಾವಣಾ ಪ್ರಣಾಳಿಕೆ: ಕಾರ್ಮಿಕರಿಗೆ ಕನಿಷ್ಠ ವೇತನ ₹18000 ಭರವಸೆ

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2019, 12:54 IST
Last Updated 28 ಮಾರ್ಚ್ 2019, 12:54 IST
   

ನವದೆಹಲಿ: ಕಾರ್ಮಿಕರಿಗೆ ಪ್ರತಿ ತಿಂಗಳು ಕನಿಷ್ಠ ವೇತನ ₹18,000 ನೀಡುವ ಭರವಸೆಯೊಂದಿಗೆ ಸಿಪಿಎಂ ಗುರುವಾರ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿದೆ.

ಸಿಪಿಎಂ ಮತ್ತು ಎಡಪಕ್ಷಗಳು ಪ್ರತಿನಿಧೀಕರಿಸುವ ಜಾತ್ಯಾತೀತ ಸರ್ಕಾರಕೇಂದ್ರದಲ್ಲಿ ಅಧಿಕಾರ ನಡೆಸುವ ಗುರಿಯೊಂದಿಗೆ ಈ ಪ್ರಣಾಳಿಕೆ ಬಿಡುಗಡೆ ಮಾಡಲಾಗಿದೆ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಹೇಳಿದ್ದಾರೆ. ಅದೇ ವೇಳೆ ಬಿಜೆಪಿಯನ್ನು ಪರಾಭವಗೊಳಿಸುವುದೇ ನಮ್ಮ ಪ್ರಧಾನ ಗುರಿ ಎಂದಿದ್ದಾರೆ ಅವರು.

ಆರೋಗ್ಯ ವಿಮೆ ವಲಯದಲ್ಲಿ ಖಾಸಗಿ ಕಂಪನಿಗಳನ್ನು ಕೈ ಬಿಡಲಾಗುವುದು.ಕನಿಷ್ಠ ಬೆಂಬಲ ಬೆಲೆಯಲ್ಲಿ ತಮ್ಮ ಉತ್ಪನ್ನಗಳನ್ನು ಮಾರುವುದು ರೈತರ ಹಕ್ಕು. ಹಾಗಾಗಿ ರೈತರು ಉತ್ಪಾದಿಸುವ ಬೆಲೆಗಿಂತ ಕನಿಷ್ಠ ಶೇ. 50 ರಷ್ಟು ಹೆಚ್ಚಿಗೆ ಬೆಲೆಗೆ ಉತ್ಪನ್ನಗಳು ಮಾರಾಟವಾಗುವಂತಿರಬೇಕು. ಅಕ್ಕಿ ಬೆಲೆ ಕೆಜಿಗೆ ₹2 ರೂಪಾಯಿಯಂತೆ ಪ್ರತಿಯೊಬ್ಬ ವ್ಯಕ್ತಿಗೆ 7 ಕೆಜಿ ಅಥವಾ ಕುಟುಂಬಕ್ಕೆ 35 ಕೆಜಿ ಆಹಾರ ಧಾನ್ಯಗಳನ್ನು ಒದಗಿಸಲಾಗುವುದು. ಈ ಭರವಸೆಗಳು ಸೇರಿದಂತೆ ಒಟ್ಟು15 ಭರವಸೆಗಳು ಪ್ರಣಾಳಿಕೆಯಲ್ಲಿದೆ.

ADVERTISEMENT

ದೇಶದ ಇತಿಹಾಸದಲ್ಲಿ ಇದು ನಿರ್ಣಾಯಕ ಚುನಾವಣೆ ಆಗಲಿದೆ ಎಂಬುದು ಪ್ರಣಾಳಿಕೆಯ ಮುನ್ನುಡಿ.ಸಿಪಿಎಂ ಈ ಹಿಂದಿನ ವರ್ಷಗಳಲ್ಲಿ ನಡೆಸಿದ ರೈತ ಪರ ಹೋರಾಟ, ಕಾರ್ಮಿಕರ ಹಕ್ಕುಗಳಿಗಾಗಿ ನಡೆಸಿದ ಹೋರಾಟಗಳನ್ನು ಈ ಪ್ರಣಾಳಿಕೆಯ ಆರಂಭದಲ್ಲಿ ಉಲ್ಲೇಖಿಸಲಾಗಿದೆ.

ಪ್ರಧಾನ ಭರವಸೆಗಳು
1. ಆಹಾರ ಸುರಕ್ಷೆ ಕಲ್ಪಿಸುವುದಕ್ಕಾಗಿ ಒಬ್ಬ ವ್ಯತ್ತಿಗೆ 7 ಕೆಜಿ ಆಹಾರ ಧಾನ್ಯವನ್ನು ಕೆಜಿಗೆ ₹2ರಂತೆ ನೀಡುವುದು ಅಥವಾ ಕುಟುಂಬವೊಂದಕ್ಕೆ 35ಕೆಜಿ ಅಕ್ಕಿ ನೀಡುವುದು.

2. ಆರೋಗ್ಯ ಸುರಕ್ಷೆಯನ್ನು ಹಕ್ಕು ಎಂಬಂತೆ ಮಾಡಲಾಗುವುದು
3. ಆರೋಗ್ಯ ವಿಮೆ ವಲಯದಿಂದ ಖಾಸಗಿ ಕಂಪನಿಗಳನ್ನು ಕೈ ಬಿಡುವುದು
4. ವೃದ್ದಾಪ್ಯ ಪಿಂಚಣಿ ₹1000 ಮಾಡುವುದು ಇಲ್ಲವೇಕನಿಷ್ಠ ವೇತನದ ಅರ್ಧದಷ್ಟು ಮಾಡುವುದು.
5.ಎಸ್‍ಸಿ/ಎಸ್‍ಟಿ ವಿಭಾಗದ ಜನರಿಗೆ ಖಾಸಗಿ ಕ್ಷೇತ್ರಗಳಲ್ಲಿಯೂ ಮೀಸಲಾತಿ
6. ಡಿಜಿಟಲ್ ವಲಯದಲ್ಲಿ ಸರ್ಕಾರ ಮೂಗು ತೂರಿಸುವುದನ್ನು ನಿಲ್ಲಿಸಲಾಗುವುದು
7. ಎಲ್‌ಜಿಬಿಟಿ ಸಮುದಾಯಕ್ಕೆಶಿಕ್ಷಣ ಮತ್ತು ಉದ್ಯೋಗ ಕ್ಷೇತ್ರದಲ್ಲಿ ಮೀಸಲಾತಿ ನೀಡಲಾಗುವುದು
8. ಮಹಿಳಾ ಮೀಸಲಾತಿ ಮಸೂದೆ ಜಾರಿ ಮಾಡಲಾಗುವುದು
9.ನಿರ್ಣಾಯಕ ಹುದ್ದೆಗಳಿಗೆ ಬಿಜೆಪಿ ನೇಮಕ ಮಾಡಿದ್ದ ಆರ್‌ಎಸ್‌ಎಸ್ ನೇತಾರರನ್ನು ಕೈ ಬಿಡಲಾಗುವುದು.
10. ದೇಶದ್ರೋಹ ಕಾನೂನು ರದ್ದು ಮಾಡಲಾಗುವುದು

ಇತಿಹಾಸದಲ್ಲಿ ಇದೇ ಮೊದಲ ಬಾರಿ ಚುನಾವಣಾ ಪ್ರಣಾಳಿಕೆಯ ಆಡಿಯೊವನ್ನು ಕೂಡಾ ಸಿಪಿಎಂ ಬಿಡುಗಡೆ ಮಾಡಿದೆ. ದೃಷ್ಟಿದೋಷವುಳ್ಳವರಿಗಾಗಿ ಈ ರೀತಿ ಆಡಿಯೊ ಬಿಡುಗಡೆ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.