ರಾಜಗೀರ್ (ಬಿಹಾರ): ‘ಬಿಹಾರದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಿಕೊಳ್ಳದ ನಿತೀಶ್ ಕುಮಾರ್ ನೇತೃತ್ವದ ಎನ್‌ಡಿಎ ಸರ್ಕಾರದಿಂದಾಗಿ ರಾಜ್ಯವು ದೇಶದ ಅಪರಾಧದ ರಾಜಧಾನಿಯಾಗಿ ಪರಿವರ್ತನೆಗೊಂಡಿದೆ’ ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಶುಕ್ರವಾರ ಆರೋಪಿಸಿದರು.
ಇಲ್ಲಿ ನಡೆದ ‘ಸಂವಿಧಾನ ಸುರಕ್ಷಾ ಸಮ್ಮೇಳನ’ದಲ್ಲಿ ಮಾತನಾಡಿದ ಅವರು, ‘ಒಂದು ಕಾಲದಲ್ಲಿ ಶಾಂತಿ ಮತ್ತು ನ್ಯಾಯದ ಭೂಮಿಯಾಗಿದ್ದ ಬಿಹಾರ, ಈಗ ಭಾರತದ ಅಪರಾಧದ ರಾಜಧಾನಿಯಾಗಿ ಮಾರ್ಪಟ್ಟಿದೆ’ ಎಂದು ಬೇಸರ ವ್ಯಕ್ತಪಡಿಸಿದರು.
ಹಿಂದುಳಿದ ವರ್ಗಗಳು, ದಲಿತ ಅಥವಾ ಬುಡಕಟ್ಟು ಸಮುದಾಯಗಳ ಯಾವುದೇ ಅಧಿಕಾರಿಗಳಿಂದ ಪ್ರಶ್ನಾವಳಿಯನ್ನು ಅಂತಿಮಗೊಳಿಸದೇ, ಕೇಂದ್ರ ಸರ್ಕಾರವು ಜಾತಿ ಜನಗಣತಿಯನ್ನು ಸರಿಯಾಗಿ ನಡೆಸುತ್ತದೆಯೇ ಎಂದು ಅವರು ಸಂಶಯ ವ್ಯಕ್ತಪಡಿಸಿದರು.
‘ಭಾರತ– ಪಾಕಿಸ್ತಾನ ನಡುವಿನ ಸೇನಾ ಸಂಘರ್ಷ ಶಮನಕ್ಕೆ ಸಂಬಂಧಿಸಿದಂತೆ ಎರಡೂ ದೇಶಗಳ ನಡುವೆ ಶಾಂತಿ ಸ್ಥಾಪನೆಗೆ ತಾನು ಮಧ್ಯವರ್ತಿಯಾಗಿ ಕೆಲಸ ಮಾಡಿದ್ದಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇತ್ತೀಚೆಗೆ 11 ಬಾರಿ ಹೇಳಿದ್ದಾರೆ. ಈ ಬಗ್ಗೆ ಪ್ರಧಾನಿ ಮೋದಿ ಅವರು ಕನಿಷ್ಠ ಪ್ರತಿಭಟನಾ ಹೇಳಿಕೆಯನ್ನೂ ನೀಡಿಲ್ಲ. ಬದಲಿಗೆ ಮೌನಿಯಾಗಿದ್ದಾರೆ. ಈ ವಿಷಯದಲ್ಲಿ ಅವರಿಗೆ ಹೇಳುವುದು ಏನೂ ಇಲ್ಲ ಎಂಬುದು ನನಗೆ ಗೊತ್ತಿದೆ’ ಎಂದು ರಾಹುಲ್ ಗಾಂಧಿ ಟೀಕಿಸಿದರು.
‘ಹೀಗೆ ಪ್ರಧಾನಿ ನರೇಂದ್ರ ಮೋದಿ ಅವರು ಶರಣಾಗಿದ್ದಾರೆ’ ಎಂದು ಹೇಳಿದ ಅವರು ‘ನರೇಂದರ್ ಸರೆಂಡರ್’ ಹೇಳಿಕೆಯನ್ನು ಪುನರುಚ್ಚರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.