ADVERTISEMENT

ವ್ಯಾಜ್ಯ, ಪ್ರೀತಿ ಕಾರಣದ ಕೊಲೆಗಳ ಸಂಖ್ಯೆಯಲ್ಲಿ ಏರಿಕೆ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2019, 4:05 IST
Last Updated 20 ನವೆಂಬರ್ 2019, 4:05 IST
   

ಬೆಂಗಳೂರು: ದೇಶದಲ್ಲಿ ವಿವಿಧ ವ್ಯಾಜ್ಯ, ದ್ವೇಷ ಮತ್ತು ಪ್ರೀತಿಗೆ ಸಂಬಂಧಿಸಿದ (ಅನೈತಿಕ ಸಂಬಂಧವೂ ಸೇರಿ) ಕಾರಣಗಳಿಗೆ ನಡೆಯುವ ಕೊಲೆಗಳ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದೆ. ಕೊಲೆಗಳ ಹಿಂದಿನ ಪ್ರಚೋದನೆಯಲ್ಲಿ ಈ ಮೂರೂ ಕಾರಣಗಳು ಕ್ರಮವಾಗಿ ಮೊದಲ ಮೂರು ಸ್ಥಾನ ಪಡೆದಿವೆ.

ರಾಷ್ಟ್ರೀಯ ಆಪರಾಧ ದಾಖಲೆಗಳ ಬ್ಯೂರೊ (ಎನ್‌ಸಿಆರ್‌ಬಿ) ಈಚೆಗೆ ಬಿಡುಗಡೆ ಮಾಡಿರುವ, ‘ಭಾರತದಲ್ಲಿ ಅಪರಾಧ–2017’ ವಾರ್ಷಿಕ ವರದಿಯಲ್ಲಿ ಈ ಮಾಹಿತಿ ಇದೆ.

2017ರಲ್ಲಿ ಭೂ, ಹಣಕಾಸು ಸಂಬಂಧಿ ವ್ಯಾಜ್ಯಗಳ ಕಾರಣಕ್ಕೆ 7,898 ಕೊಲೆಗಳು ನಡೆದಿವೆ. 2015ಕ್ಕೆ ಹೋಲಿಸಿದರೆ ಇಂತಹ ಹತ್ಯೆಗಳ ಸಂಖ್ಯೆ 2017ರಲ್ಲಿ ಶೇ 55ರಷ್ಟು ಏರಿಕೆಯಾಗಿದೆ.

ADVERTISEMENT

2017ರಲ್ಲಿ ದ್ವೇಷದ ಕಾರಣಕ್ಕೆ 4,660 ಕೊಲೆಗಳು ನಡೆದಿವೆ. 2015ಕ್ಕೆ ಹೋಲಿಸಿದರೆ ಇಂತಹ ಹತ್ಯೆಗಳ ಸಂಖ್ಯೆ 2017ರಲ್ಲಿ ಶೇ 1ರಷ್ಟು ಇಳಿಕೆ ಕಂಡಿದೆ.

2017ರಲ್ಲಿ ಪ್ರೀತಿ ಮತ್ತು ಅನೈತಿಕ ಸಂಬಂಧಗಳ ಕಾರಣಕ್ಕೆ ದೇಶದಾದ್ಯಂತ 3,128 ಕೊಲೆಗಳು ನಡೆದಿವೆ. 2015ಕ್ಕೆ ಹೋಲಿಸಿದರೆ ಇಂತಹ ಹತ್ಯೆಗಳ ಸಂಖ್ಯೆ 2017ರಲ್ಲಿ ಶೇ 5.8ರಷ್ಟು ಏರಿಕೆಯಾಗಿದೆ. 2000ಕ್ಕೆ ಹೋಲಿಸಿದರೆ, 2017ರಲ್ಲಿ ಇಂತಹ ಹತ್ಯೆಗಳ ಸಂಖ್ಯೆಯಲ್ಲಿ ಶೇ 16.5ರಷ್ಟು ಏರಿಕೆಯಾಗಿದೆ.

ಪ್ರೀತಿ ಸಂಬಂಧಿ ಹತ್ಯೆಗಳು ಹೆಚ್ಚು ನಡೆದ ರಾಜ್ಯಗಳು

* ಇಂತಹ ಹತ್ಯೆಗಳು ಅತಿಹೆಚ್ಚು ನಡೆದ ರಾಜ್ಯಗಳ ಪಟ್ಟಿಯಲ್ಲಿ ಉತ್ತರ ಪ್ರದೇಶ ಮೊದಲ ಸ್ಥಾನದಲ್ಲಿದೆ. ಆದರೂ 18 ವರ್ಷಗಳಲ್ಲಿ ಇಂತಹ ಹತ್ಯೆಗಳ ಸಂಖ್ಯೆಯಲ್ಲಿ ಭಾರಿ ಏರಿಳಿತವಾಗಿದೆ. 2015ರಲ್ಲಿ ಅತ್ಯಂತ ಹೆಚ್ಚು ಹತ್ಯೆಗಳು ನಡೆದಿವೆ. 2017ರಲ್ಲಿ ಸ್ವಲ್ಪ ಇಳಿಕೆಯಾಗಿದೆ

* ಅವಿಭಜಿತ ಆಂಧ್ರಪ್ರದೇಶವು ಈ ಸ್ವರೂಪದ ಹತ್ಯೆಗಳ ಸಂಖ್ಯೆಯಲ್ಲಿ ಏರಿಳಿತ ಕಂಡಿದೆ. 2005ರಲ್ಲಿ ಇಂತಹ ಹತ್ಯೆಗಳು ಗರಿಷ್ಠ ಸಂಖ್ಯೆಯಲ್ಲಿ ನಡೆದಿವೆ. ಆದರೆ, ಆನಂತರದ ವರ್ಷಗಳಲ್ಲಿ ಪ್ರೀತಿ ಸಂಬಂಧಿ ಹತ್ಯೆಗಳ ಸಂಖ್ಯೆ ಇಳಿಕೆಯಾಗಿದೆ. ಆದರೂ, ರಾಜ್ಯದಲ್ಲಿ ನಡೆದ ಹತ್ಯೆಗಳಲ್ಲಿ ಅತಿ ಹೆಚ್ಚಿನ ಹತ್ಯೆಗಳು ಈ ಕಾರಣಕ್ಕೇ ನಡೆದಿವೆ

* ಬಿಹಾರವೂ ಈ ಸ್ವರೂಪದ ಹತ್ಯೆಗಳ ಸಂಖ್ಯೆಯಲ್ಲಿ ಭಾರಿ ಏರಿಳಿತ ಕಂಡಿದೆ. 2005 ಮತ್ತು 2010ರಲ್ಲಿ ಇಂತಹ ಹತ್ಯೆಗಳ ಸಂಖ್ಯೆ ಇಳಿಕೆಯಾಗಿದೆ. ಆದರೆ, 2015ರ ನಂತರ ಏರಿಕೆಯಾಗಿದೆ. 2017ರಲ್ಲಿ ಇಂತಹ ಅತಿ ಹೆಚ್ಚಿನ ಹತ್ಯೆಗಳು ನಡೆದಿವೆ.ಇಂತಹ ಹತ್ಯೆಗಳು ಹೆಚ್ಚಿನ ಸಂಖ್ಯೆಯಲ್ಲಿ ನಡೆದ ರಾಜ್ಯಗಳ ಪಟ್ಟಿಯಲ್ಲಿ ಬಿಹಾರ 2ನೇ ಸ್ಥಾನದಲ್ಲಿದೆ

* ಮಹಾರಾಷ್ಟ್ರವು ಈ ಸ್ವರೂಪದ ಹತ್ಯೆಗಳ ಸಂಖ್ಯೆಯಲ್ಲಿ ಭಾರಿ ಏರಿಳಿತ ಕಂಡಿದೆ. ಆದರೆ 2017ರಲ್ಲಿ ಇಂತಹ ಹತ್ಯೆಗಳು ಹೆಚ್ಚಿನ ಸಂಖ್ಯೆಯಲ್ಲಿ ನಡೆದಿವೆ. ಇಂತಹ ಹತ್ಯೆಗಳು ಹೆಚ್ಚಿನ ಸಂಖ್ಯೆಯಲ್ಲಿ ನಡೆದ ರಾಜ್ಯಗಳ ಪಟ್ಟಿಯಲ್ಲಿ ಮಹಾರಾಷ್ಟ್ರ ಮೂರನೇ ಸ್ಥಾನದಲ್ಲಿದೆ

* ಕರ್ನಾಟಕದಲ್ಲೂ ಇಂತಹ ಹತ್ಯೆಗಳು ಗಣನೀಯ ಸಂಖ್ಯೆಯಲ್ಲೇ ನಡೆದಿವೆ. 2017ರಲ್ಲಿ ಇಂತಹ ಹತ್ಯೆಗಳು ಹೆಚ್ಚಿನ ಸಂಖ್ಯೆಯಲ್ಲಿ ನಡೆದ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕವೂ ಸ್ಥಾನ ಪಡೆದಿದೆ. 7ನೇ ಸ್ಥಾನದಲ್ಲಿದೆ.

1,384 - 2017ರಲ್ಲಿ ಕರ್ನಾಟಕದಲ್ಲಿ ನಡೆದ ಕೊಲೆಗಳು
12% -2017ರಲ್ಲಿ ರಾಜ್ಯದಲ್ಲಿ ನಡೆದ ಕೊಲೆಗಳಲ್ಲಿ ಪ್ರೀತಿ ಸಂಬಂಧಿ ಹತ್ಯೆಗಳ ಪ್ರಮಾಣ

ಕೊಲೆಗಳ ಸಂಖ್ಯೆ ಇಳಿಕೆ
2000ಕ್ಕೆ ಹೋಲಿಸಿದರೆ 2017ರಲ್ಲಿ ಕೊಲೆಗಳ ಸಂಖ್ಯೆ ಇಳಿಕೆಯಾಗಿದೆ
37,399-2000ರಲ್ಲಿ ದೇಶದಲ್ಲಿ ದಾಖಲಾಗಿದ್ದ ಕೊಲೆ ಪ್ರಕರಣಗಳು
28,653 - 2017ರಲ್ಲಿ ದೇಶದಲ್ಲಿ ದಾಖಲಾದ ಕೊಲೆ ಪ್ರಕರಣಗಳು
23.5% - 2000ರ ಹೋಲಿಕೆಯಲ್ಲಿ 2017ರಲ್ಲಿ ಕೊಲೆಗಳ ಸಂಖ್ಯೆಯಲ್ಲಿ ಆದ ಇಳಿಕೆ ಪ್ರಮಾಣ

ಮಹಿಳೆಯರ ಮೇಲಿನ ಅಪರಾಧ ಹೆಚ್ಚಳ
ಮಹಿಳೆಯರ ಮೇಲೆ ನಡೆಯುತ್ತಿರುವ ಅಪರಾಧಗಳ ಸಂಖ್ಯೆಯಲ್ಲಿ ಏರಿಕೆಯಾಗಿದೆ. 2015ಕ್ಕೆ ಹೋಲಿಸಿದರೆ 2017ರಲ್ಲಿ ಮಹಿಳೆಯರ ಮೇಲೆ ಮತ್ತು ಮಹಿಳೆಯರನ್ನು ಗುರಿಯಾಗಿಸಿಕೊಂಡು ನಡೆಸಲಾದ ಅಪರಾಧ ಕೃತ್ಯಗಳ ಸಂಖ್ಯೆಯಲ್ಲಿ ಶೇ 9ರಷ್ಟು ಏರಿಕೆಯಾಗಿದೆ.

3.29 ಲಕ್ಷ - 2015ರಲ್ಲಿ ದಾಖಲಾದ ಪ್ರಕರಣಗಳು
3.38 ಲಕ್ಷ - 2016ರಲ್ಲಿದಾಖಲಾದ ಪ್ರಕರಣಗಳು
3.59 ಲಕ್ಷ - 2017ರಲ್ಲಿ ದಾಖಲಾದ ಪ್ರಕರಣಗಳು

33,658 - 2017ರಲ್ಲಿ ದೇಶದಲ್ಲಿ ದಾಖಲಾದ ಅತ್ಯಾಚಾರ ಪ್ರಕರಣಗಳು

9 % - 2017ರಲ್ಲಿ ಮಹಿಳೆಯರ ವಿರುದ್ಧ ನಡೆದ ಅಪರಾಧ ಪ್ರಕರಣಗಳಲ್ಲಿ ಅತ್ಯಾಚಾರದ ಪ್ರಮಾಣ
23,437 -ಅತ್ಯಾಚಾರ ಸಂತ್ರಸ್ತ ಮಹಿಳೆಯರು
10,221 - ಅತ್ಯಾಚಾರ ಸಂತ್ರಸ್ತ ಬಾಲಕಿಯರು

ಆಧಾರ: ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೊ, ಭಾರತದಲ್ಲಿ ಅಪರಾಧ–2000, 2005, 2010, 2015, 2017ನೇ ಸಾಲಿನ ವರದಿಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.