ಸಾಂದರ್ಭಿಕ ಚಿತ್ರ
ಲಖನೌ: ಭೂ ವಿವಾದದ ಕಾರಣಕ್ಕೆ ಆಕ್ರೋಶಗೊಂಡ ಕಿಡಿಗೇಡಿಯೊಬ್ಬ, ತನ್ನ ನೆರೆಮನೆಯ 17 ವರ್ಷದ ಯುವಕನ ತಲೆ ಕಡಿದು ಕೊಲೆ ಮಾಡಿರುವ ಕ್ರೂರ ಘಟನೆ ಜೌನ್‌ಪುರ ಜಿಲ್ಲೆಯ ಕಬ್ರುದ್ದೀನ್‌ಪುರ ಗ್ರಾಮದಲ್ಲಿ ಬುಧವಾರ ವರದಿಯಾಗಿದೆ.
ಮೃತ ವ್ಯಕ್ತಿಯನ್ನು ಕಬ್ರುದ್ದೀನ್‌ಪುರ ಗ್ರಾಮದ 17 ವರ್ಷದ ಅನುರಾಗ್ ಯಾದವ್ ಅಲಿಯಾಸ್ ಚೋಟು ಯಾದವ್ ಎಂದು ಗುರುತಿಸಲಾಗಿದೆ. ಮನೆಯ ಹೊರಗೆ ಹಲ್ಲು ಉಜ್ಜುತ್ತಾ ನಿಂತಿದ್ದ ಆತನ ಮೇಲೆ, ಪಕ್ಕದ ಮನೆಯ ಲಲ್ತಾ ಯಾದವ್ ಕತ್ತಿಯಿಂದ ಹಲ್ಲೆ ಮಾಡಿ, ಕತ್ತನ್ನು ಕತ್ತರಿಸಿದ್ದಾನೆ. ಕೃತ್ಯದ ಬೆನ್ನಲ್ಲೇ ಆತ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ಕೃತ್ಯದಿಂದ ಆಕ್ರೋಶಗೊಂಡ ಸ್ಥಳೀಯರು, ದುಷ್ಕರ್ಮಿಯ ಬಂಧನಕ್ಕೆ ಆಗ್ರಹಿಸಿ ರಸ್ತೆ ತಡೆ ನಡೆಸಿ ಪ್ರತಿಭಟಿಸಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆ ವಿವಿಧ ಠಾಣೆಗಳ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದಾರೆ.
ಆರೋಪಿಯ ತಂದೆ ರಮೇಶ್ ಯಾದವ್ ಎಂಬವರನ್ನು ಬಂಧಿಸಲಾಗಿದೆ. ಲಲ್ತಾ ಬಂಧನಕ್ಕೆ ಬಲೆ ಬೀಸಿದ್ದೇವೆ. ಜಾಗದ ವಿಚಾರವಾಗಿ ಎರಡೂ ಕುಟುಂಬಗಳ ಮಧ್ಯೆ 40 ವರ್ಷಗಳಿಂದ ವ್ಯಾಜ್ಯ ನಡೆಯುತ್ತಿದೆ. ಪ್ರಕರಣ ಸದ್ಯ ಜಿಲ್ಲಾ ನ್ಯಾಯಾಲಯದಲ್ಲಿದೆ ಎಂದು ಪೊಲೀಸರು ಹೇಳಿದ್ದಾರೆ.
ಶಾಂತಿ–ಸುವ್ಯವಸ್ಥೆ ಕಾಪಾಡುವ ಸಲುವಾಗಿ ಗ್ರಾಮದಲ್ಲಿ ಭಾರಿ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ.
ಪ್ರಕರಣ ಸಂಬಂಧ ಮ್ಯಾಜಿಸ್ಟ್ರೇಟ್ ತನಿಖೆಗೆ ಆದೇಶಿಸಲಾಗಿದೆ. ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಅವರು, ಮೂರು ದಿನಗಳ ಒಳಗಾಗಿ ವರದಿ ಸಲ್ಲಿಸುವಂತೆ ತಿಳಿಸಿದ್ದಾರೆ ಎಂದು ಜೌನ್‌ಪುರ ಜಿಲ್ಲೆಯ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಮೃತ ಯುವಕ, ಸ್ಥಳೀಯ ಕಾಲೇಜಿನಲ್ಲಿ 12ನೇ ತರಗತಿ ವ್ಯಾಸಂಗ ಮಾಡುತ್ತಿದ್ದ. ಟೇಕ್ವಾಂಡೊ ಆಟಗಾರನಾಗಿದ್ದ ಆತ, ರಾಜ್ಯ ಮತ್ತು ರಾಷ್ಟ್ರ ಮಟ್ಟದ ಸ್ಪರ್ಧೆಗಳಲ್ಲಿ ಹಲವು ಪದಕಗಳನ್ನು ಗೆದ್ದಿದ್ದ.
ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಅವರು ಪ್ರಕರಣದ ಕುರಿತು ಪ್ರತಿಕ್ರಿಯಿಸಿದ್ದು, ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
'ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಅಧೋಗತಿಗೆ ಕುಸಿದಿರುವುದಕ್ಕೆ ಈ ಘಟನೆ ಸಾಕ್ಷಿಯಾಗಿದೆ. ಸರ್ಕಾರ ದುರ್ಬಲ ಹಾಗೂ ಅಸಮರ್ಥವಾಗಿದೆ. ಇಂತಹ ಅಪರಾಧ ಪ್ರಕರಣಗಳು ಹೆಚ್ಚುತ್ತಿವೆ' ಎಂದು ಕಿಡಿಕಾರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.