ಚಿತ್ರ ಕೃಪೆ: ಪ್ರಾತಿನಿಧಿಕ ಚಿತ್ರ
ಬಹ್ರೈಚ್ : ಉತ್ತರ ಪ್ರದೇಶದ ಖೈರಿಘಾಟ್ ಧಾಕಿಯಾ ಗ್ರಾಮ ಹಾಗೂ ಮೋತಿಪುರದ ಮಾಧವಪುರದಲ್ಲಿ ಮಹಿಳೆಯರು ಮೊಸಳೆಯೊಂದಿಗೆ ಹೋರಾಡಿದ್ದಾರೆ. ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಒಬ್ಬರು ಐದು ವರ್ಷದ ಮಗನನ್ನು ರಕ್ಷಿಸಿದರೆ, ಇನ್ನೊಬ್ಬರು ತಮ್ಮ ಗಂಡನನ್ನು ರಕ್ಷಿಸಿದ್ದಾರೆ.
ಖೈರಿಘಾಟ್ ನ ಧಾಕಿಯಾ ಗ್ರಾಮದಲ್ಲಿ ಮೊದಲ ಘಟನೆ ಸಂಭವಿಸಿದೆ. ಘಾಗ್ರಾ ನದಿ ಸಮೀಪ ಏಳು ಅಡಿ ಉದ್ದದ ಮೊಸಳೆ ವೀರು ಎಂಬ ಬಾಲಕನನ್ನು ಎಳೆದೊಯುತ್ತಿತ್ತು.
ಬಾಲಕ ವೀರು ಕೂಗು ಕೇಳಿ ಅವನ ತಾಯಿ ಮಾಯಾ ಕಬ್ಬಿಣದ ಸರಳುಗಳಿಂದ ಮೊಸಳೆಗೆ ಹೊಡೆದು ತನ್ನ ಮಗನನ್ನು ರಕ್ಷಿಸಿದ್ದಾಳೆ. ಮಗುವಿಗೆ ಗಾಯಗಳಾಗಿದ್ದು ಚಿಕಿತ್ಸೆ ಪಡೆಯುತ್ತಿದೆ ಎಂದು ಬಹ್ರೈಚ್‌ನ ವಿಭಾಗೀಯ ಅರಣ್ಯ ಅಧಿಕಾರಿ ರಾಮ್ ಸಿಂಗ್ ಯಾದವ್ ಹೇಳಿದ್ದಾರೆ.
ಮೋತಿಪುರದ ಮಾಧವಪುರ ಗ್ರಾಮದಲ್ಲಿ ಮೊಸಳೆ ದಾಳಿಯ ಎರಡನೇ ಘಟನೆ
45 ವರ್ಷದ ಸೈಫು ತನ್ನ ಪತ್ನಿ ಸುರ್ಜನಾ ಹಾಗೂ ಅತ್ತಿಗೆಯೊಂದಿಗೆ ರಾಮತಾಲಿಯಾ ಕಾಲುವೆಯನ್ನು ದಾಟುತ್ತಿದ್ದಾಗ ಮೊಸಳೆ ದಾಳಿ ನಡೆಸಿದೆ.
ಕಾಲುವೆ ದಾಟುವಾಗ ಸೈಫು ಕಾಲಿಗೆ ಮೊಸಳೆ ಬಾಯಿ ಹಾಕಿ ಕಚ್ಚಿ ಹಿಡಿದಿದೆ. ತನ್ನ ಪತಿ ದಡ ಸೇರಲು ಸುರ್ಜನಾ ತನ್ನ ಸೀರೆಯನ್ನೇ ನೀರಿಗೆ ಹಾಕಿದ್ದಾಳೆ.
ಅವನ ಕಿರುಚಾಟಕ್ಕೆ ಓಡಿ ಬಂದ ಗ್ರಾಮಸ್ಥರು ಮೊಸಳೆಯನ್ನು ಕೋಲುಗಳಿಂದ ಹೊಡೆದು ಸೈಫನ್ನು ಕಾಪಾಡಿದ್ದಾರೆ. ಆತನ ಕಾಲಿಗೆ ಗಾಯವಾಗಿದ್ದರಿಂದ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಭಾರೀ ಮಳೆಯಿಂದಾಗಿ ನದಿಗಳು ಮತ್ತು ಕಾಲುವೆಗಳಲ್ಲಿ ನೀರಿನ ಮಟ್ಟ ಹೆಚ್ಚಾಗಿದೆ, ಮೊಸಳೆಗಳು ಜನವಸತಿ ಪ್ರದೇಶಗಳಿಗೆ ಬರುತ್ತವೆ. ನದಿ – ಹೊಳೆ ಪಕ್ಕ ಎಚ್ಚರದಿಂದಿರಿ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.