ADVERTISEMENT

ಡಯಾಬಿಟಿಸ್ ಬಗ್ಗೆ ಸರ್ಕಾರಗಳಿಗೆ ಮಹತ್ವದ ಸಲಹೆ ನೀಡಿದ ಸುಪ್ರೀಂ ಕೋರ್ಟ್‌ ಸಿಜೆಐ

ಪಿಟಿಐ
Published 28 ನವೆಂಬರ್ 2021, 14:17 IST
Last Updated 28 ನವೆಂಬರ್ 2021, 14:17 IST
ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ
ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ   

ನವದೆಹಲಿ: ಮನುಷ್ಯನ ಜೀವನವು ಅಮೂಲ್ಯ, ‘ದುಬಾರಿ ರೋಗ’ವೆಂದೇ ಪರಿಗಣಿತವಾಗಿರುವ ಮಧುಮೇಹ ಚಿಕಿತ್ಸೆಗೆ ರಾಜ್ಯ ಸರ್ಕಾರಗಳು ಸಹಾಯಧನ ನೀಡುವುದು ಅತ್ಯಗತ್ಯ ಎಂದು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ ಅವರು ಭಾನುವಾರ ಹೇಳಿದ್ದಾರೆ.

ಮಧುಮೇಹದ ಕುರಿತು ಅಹುಜಾ ಬಜಾಜ್ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ‘ಕೋವಿಡ್– 19 ನಮ್ಮ ಆರೋಗ್ಯ ವ್ಯವಸ್ಥೆಯ ದುರ್ಬಲತೆಯನ್ನು ಈಗಲಾಗಲೇ ಬಹಿರಂಗಪಡಿಸಿದೆ. ಕೋವಿಡ್ ಹರಡುತ್ತಿದ್ದಂತೆಯೇ ಭಾರತದ ವಿಜ್ಞಾನಿ, ಸಂಶೋಧಕರು ಕೆಲವೇ ತಿಂಗಳುಗಳಲ್ಲಿ ಲಸಿಕೆ ಕಂಡುಹಿಡಿದರು. ಅಂತೆಯೇ ಮಧುಮೇಹಕ್ಕೆ ಪರಿಹಾರವನ್ನು ಕಂಡುಹಿಡಿಯಲು ಆಧುನಿಕ ಔಷಧಿಗಳನ್ನು ಆವಿಷ್ಕರಿಸುವುದು ಮತ್ತು ಅಭಿವೃದ್ಧಿಪಡಿಸುವುದು ಈ ಸಮಯದ ಅಗತ್ಯವಾಗಿದೆ’ ಎಂದು ಹೇಳಿದರು.

‘ಬಹುಪಾಲು ಜನರಿಗೆ ಇನ್ಸುಲಿನ್ ಮತ್ತು ಮಧುಮೇಹಕ್ಕೆ ಸಂಬಂಧಿಸಿದ ಆರೋಗ್ಯ ರಕ್ಷಣೆ ಉತ್ಪನ್ನಗಳು ಹೆಚ್ಚು ಕೈಗೆಟುಕುವಂತಿಲ್ಲ.ಈ ರೋಗವು ಬಡವನ ಶತ್ರುವಾಗಿದ್ದು, ಇದು ‘ದುಬಾರಿ ಕಾಯಿಲೆ’ಯಾಗಿದೆ. ರೋಗಿಯ ಜೀವಿತಾವಧಿಯಲ್ಲಿ ಪದೇಪದೇ ಆರ್ಥಿಕ ಹೊರೆಯಾಗಿದೆ. ಹಾಗಾಗಿ, ರಾಜ್ಯ ಸರ್ಕಾರಗಳು ಮಧುಮೇಹ ಚಿಕಿತ್ಸೆಗೆ ಸಹಾಯಧನ ನೀಡುವುದು ಅಗತ್ಯ’ ಎಂದು ಅವರು ಅಭಿಪ್ರಾಯಪಟ್ಟರು.

ADVERTISEMENT

‘ಒತ್ತಡ ನಿರ್ವಹಣೆ, ಆಹಾರದಲ್ಲಿ ಶಿಸ್ತು ಮತ್ತು ಫಿಟ್‌ನೆಸ್ ಅನ್ನು ಅನುಸರಿಸುವುದು ಮಧುಮೇಹವನ್ನು ಸೋಲಿಸಲು ಅತ್ಯಂತ ಉಪಯುಕ್ತ ಸಾಧನಗಳಾಗಿವೆ. ಅಂತೆಯೇ ಮಧುಮೇಹದ ಅಪಾಯಕಾರಿ ಅಂಶಗಳ ಬಗ್ಗೆ ಅರಿವು, ನಿಯಮಿತ ತಪಾಸಣೆ ಮತ್ತು ಸ್ಕ್ರೀನಿಂಗ್ ಸಹ ಮುಖ್ಯವಾಗಿದೆ’ ಎಂದು ಸಿಜೆಐ ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.