ADVERTISEMENT

ಡ್ರಗ್ಸ್ ಪ್ರಕರಣ: ಎನ್‌ಸಿಬಿ ಹಸ್ತಕ್ಷೇಪ, ಸಿಬಿಐ ತನಿಖೆ ಕೋರಿ ‘ಸುಪ್ರೀಂ’ಗೆ ಅರ್ಜಿ

ಪಿಟಿಐ
Published 31 ಅಕ್ಟೋಬರ್ 2021, 14:27 IST
Last Updated 31 ಅಕ್ಟೋಬರ್ 2021, 14:27 IST
ಡ್ರಗ್ಸ್ ಪ್ರಕರಣದಲ್ಲಿ ಬಂಧಿತರಾಗಿದ್ದ ಆರ್ಯನ್ ಖಾನ್
ಡ್ರಗ್ಸ್ ಪ್ರಕರಣದಲ್ಲಿ ಬಂಧಿತರಾಗಿದ್ದ ಆರ್ಯನ್ ಖಾನ್   

ನವದೆಹಲಿ: ಮುಂಬೈ ಕ್ರೂಸ್ ಹಡಗಿನ ಡ್ರಗ್ಸ್ ಪ್ರಕರಣದಲ್ಲಿ ಮಾದಕ ದ್ರವ್ಯ ನಿಯಂತ್ರಣ ಬ್ಯೂರೊ (ಎನ್‌ಸಿಬಿ) ನಡೆಸುತ್ತಿರುವ ತನಿಖೆಯಲ್ಲಿ ಹಸ್ತಕ್ಷೇಪ ನಡೆದಿದ್ದು, ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕೆಂದು ಕೋರಿ ಸುಪ್ರೀಂ ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಸಲಾಗಿದೆ.

ವಕೀಲ ಎಂ.ಎಲ್ ಶರ್ಮಾ ಎಂಬುವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಡ್ರಗ್ಸ್ ಪ್ರಕರಣದಲ್ಲಿನ ಎಲ್ಲ ಸಾಕ್ಷಿಗಳಿಗೆ ರಕ್ಷಣೆ ಒದಗಿಸಬೇಕೆಂದೂ ಕೋರಲಾಗಿದೆ.

ಬಾಲಿವುಡ್ ನಟ ಶಾರುಕ್ ಖಾನ್ ಅವರ ಮಗ ಆರ್ಯನ್ ಖಾನ್ ಮತ್ತು ಇತರರು ಆರೋಪಿಗಳಾಗಿರುವ ಈ ಪ್ರಕರಣವು ಸರಣಿ ವಿವಾದಗಳನ್ನು ಹುಟ್ಟುಹಾಕಿದ್ದು, ಎನ್‌ಸಿಬಿ ಹಾಗೂ ಅದರ ಅಧಿಕಾರಿಗಳನ್ನೂ ಬೆಳಕಿಗೆ ತಂದಿದೆ. ಕಾನೂನು ಆಯೋಗದ ವಿವಿಧ ವರದಿಗಳಲ್ಲಿ ಶಿಫಾರಸು ಮಾಡಿದಂತೆ ರಾಷ್ಟ್ರೀಯ ಸಾಕ್ಷಿ ರಕ್ಷಣೆ ಯೋಜನೆಯನ್ನು ರೂಪಿಸಲು ಕೇಂದ್ರ ಗೃಹ ಸಚಿವಾಲಯಕ್ಕೆ ನಿರ್ದೇಶನ ನೀಡಬೇಕೆಂದೂ ನ್ಯಾಯಾಲಯಕ್ಕೆ ಕೋರಲಾಗಿದೆ.

ADVERTISEMENT

ಪ್ರಕರಣದಲ್ಲಿ ಎನ್‌ಸಿಬಿ ಪ್ರಾದೇಶಿಕ ನಿರ್ದೇಶಕ ಸಮೀರ್ ವಾಂಖೆಡೆ ಮತ್ತು ಇತರರ ವಿರುದ್ಧ ಮಹಾರಾಷ್ಟ್ರ ಸಚಿವ ನವಾಬ್ ಮಲಿಕ್ ಅವರು ಮಾಡಿರುವ ಆರೋಪಗಳ ಕುರಿತು ಪಿಐಎಲ್‌ನಲ್ಲಿ ನಮೂದಿಸಿರುವ ವಕೀಲ ಶರ್ಮಾ, ಇಡೀ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.