ADVERTISEMENT

ಕ್ರೂಸ್‌ ಡ್ರಗ್ಸ್‌ ಪಾರ್ಟಿ ಸಂಘಟಕರು ಕೇಂದ್ರದಿಂದ ಅನುಮತಿ ಪಡೆದಿದ್ದರು: ಮಲಿಕ್‌

ಪಿಟಿಐ
Published 27 ಅಕ್ಟೋಬರ್ 2021, 9:12 IST
Last Updated 27 ಅಕ್ಟೋಬರ್ 2021, 9:12 IST
ನವಾಬ್ ಮಲಿಕ್
ನವಾಬ್ ಮಲಿಕ್   

ಮುಂಬೈ: ‘ಕೊರ್ಡೆಲಿಯಾ ಕ್ರೂಸ್‌ನಲ್ಲಿ ಡ್ರಗ್ಸ್ ಪಾರ್ಟಿ ನಡೆಸಲು ಸಂಘಟಕರು ನೇರವಾಗಿ ಕೇಂದ್ರದ ಬಂದರು, ಹಡಗು ಮತ್ತು ಜಲಸಾರಿಗೆ ಸಚಿವಾಲಯದ ವ್ಯಾಪ್ತಿಯಲ್ಲಿರುವ ‘ಹಡಗು ನಿರ್ದೇಶನಾಲಯ‘ದಿಂದ ಅನುಮತಿ ಪಡೆದಿದ್ದಾರೆಯೇ ಹೊರತು, ಮಹಾರಾಷ್ಟ್ರದ ಪೊಲೀಸ್ ಅಥವಾ ರಾಜ್ಯ ಗೃಹ ಇಲಾಖೆಯಿಂದಲ್ಲ‘ ಎಂದು ಮಹಾರಾಷ್ಟ್ರದ ಸಚಿವ ಮತ್ತು ಎನ್‌ಸಿಪಿ ನಾಯಕ ನವಾಬ್ ಮಲಿಕ್ ಹೇಳಿದ್ದಾರೆ.

ಬುಧವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಎನ್‌ಸಿಬಿ ಅಧಿಕಾರಿಗಳು ಇದೇ 2ರಂದು ದಾಳಿ ನಡೆಸಿದ ವೇಳೆ ಹಡಗಿನಲ್ಲಿ ಅಂತರರಾಷ್ಟ್ರೀಯ ಡ್ರಗ್ಸ್ ಮಾಫಿಯಾದ ಸದಸ್ಯರೊಬ್ಬರು ಇದ್ದರು. ಆದರೆ, ಅವರನ್ನು ಬಂಧಿಸದೆ ಕೆಲವರನ್ನು ಮಾತ್ರ ಬಂಧಿಸಿದ್ದು ಏಕೆ‘ ಎಂದು ಪ್ರಶ್ನಿಸಿದರು.

‘ಎನ್‌ಸಿಬಿ ಮುಂಬೈನ ಪ್ರಾದೇಶಿಕ ನಿರ್ದೇಶಕ ಸಮೀರ್ ವಾಂಖೆಡೆ ಉದ್ಯೋಗ ಪಡೆಯುವುದಕ್ಕಾಗಿ ನಕಲಿ ಜನನ ಪ್ರಮಾಣ ಪತ್ರ ಸಲ್ಲಿಸಿದ್ದಾರೆ ಎಂದು ಆರೋಪಿಸಿ, ನಾನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿರುವ ದಾಖಲೆಗಳು ಸುಳ್ಳು ಎಂದು ಸಾಬೀತಾದರೆ, ನಾನು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ, ರಾಜಕಾರಣದಿಂದ ನಿವೃತ್ತಿಯಾಗುತ್ತೇನೆ. ಒಂದು ವೇಳೆ ನನ್ನ ಆರೋಪ ನಿಜವಾದರೆ, ವಾಂಖೆಡೆ ಖಂಡಿತಾ ಉದ್ಯೋಗ ಕಳೆದುಕೊಳ್ಳುತ್ತಾರೆ. ಆಗ ಅವರು ಕನಿಷ್ಠ ನನ್ನ ಮತ್ತು ನನ್ನ ಕುಟುಂಬದ ಎದುರು ಕ್ಷಮೆ ಕೇಳಬೇಕು‘ ಎಂದು ಮಲಿಕ್ ಒತ್ತಾಯಿಸಿದರು.

ADVERTISEMENT

‘ಈ ಪ್ರಕರಣದ ತನಿಖೆಗಾಗಿ ದೆಹಲಿಯಿಂದ ಎನ್‌ಸಿಬಿ ಅಧಿಕಾರಿಗಳ ಉನ್ನತಮಟ್ಟದ ತಂಡವೊಂದು ಇಲ್ಲಿಗೆ ಬಂದಿದೆ. ಆ ತಂಡದವರು ಸಮೀರ್ ವಾಂಖೆಡೆ, ಕೆ.ಪಿ.ಗೋಸವಿ, ಪ್ರಭಾಕರ ಸೈಲ್‌ ಮತ್ತು ವಾಖೆಂಡೆ ವಾಹನ ಚಾಲಕ ಮಾನೆ ಅವರ ನಡುವೆ ನಡೆದಿರುವ ದೂರವಾಣಿ ಕರೆ ದಾಖಲೆಗಳನ್ನು ಪರಿಶೀಲಿಸಿದರೆ ಸಾಕು. ಸಾಕ್ಷಿಗಳ ಹೇಳಿಕೆಗಳನ್ನು ದಾಖಲಿಸಿಕೊಳ್ಳುವ ಅಗತ್ಯವೇ ಇಲ್ಲ. ಆ ದೂರವಾಣಿ ಕರೆಗಳೇ ಪ್ರಕರಣದ ಕುರಿತು ಸ್ವಯಂ ವಿವರಣೆ ನೀಡುತ್ತವೆ‘ ಎಂದು ಮಲಿಕ್ ಅಭಿಪ್ರಾಯಪಟ್ಟರು.

‘ಎನ್‌ಸಿಬಿ ತಂಡ, ಡ್ರಗ್ಸ್‌ ಪಾರ್ಟಿ ನಡೆದ ದಿನದ ಸಿಸಿಟಿವಿ ಕ್ಯಾಮೆರಾಗಳ ದೃಶ್ಯದ ತುಣುಕುಗಳನ್ನು ಪರಿಶೀಲಿಸಬೇಕು. ಆ ವಿಡಿಯೊ ಕ್ಲಿಪ್ಪಿಂಗ್‌ವೊಂದರಲ್ಲಿ ಗಡ್ಡದಾರಿ ವ್ಯಕ್ತಿಯಬ್ಬನನ್ನು ಗುರುತಿಸಬಹುದು. ಆ ವ್ಯಕ್ತಿ ಹಿಂದೆ ದೆಹಲಿಯ ತಿಹಾರ್‌ ಜೈಲಿನಲ್ಲಿ ಹಾಗೂ ರಾಜಸ್ಥಾನದ ಜೈಲಿನಲ್ಲಿದ್ದರು ಎಂದು ನಾನು ಹಿಂದೆ ಹೇಳಿದ್ದೆ‘ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.