ADVERTISEMENT

ತಮಿಳುನಾಡು ಸ್ಥಳೀಯ ಸಂಸ್ಥೆಯಲ್ಲಿ ಬಿಜೆಪಿ ಉತ್ತಮ ಸಾಧನೆ: ಸಿ.ಟಿ ರವಿ ಸಂತಸ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 22 ಫೆಬ್ರುವರಿ 2022, 14:28 IST
Last Updated 22 ಫೆಬ್ರುವರಿ 2022, 14:28 IST
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಮತ್ತು ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಮತ್ತು ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ   

ಬೆಂಗಳೂರು: ತಮಿಳುನಾಡು ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ಕಳೆದ ಬಾರಿಗಿಂತಲೂ ಈ ಬಾರಿ ಉತ್ತಮ ಸಾಧನೆ ಮಾಡಿದೆ ಎನ್ನಲಾಗಿದ್ದು, ಫಲಿತಾಂಶಕ್ಕೆ ತಮಿಳುನಾಡು ಬಿಜೆಪಿ ಉಸ್ತುವಾರಿ ಸಿ.ಟಿ ರವಿ ಮಂಗಳವಾರ ಹರ್ಷ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಟ್ವೀಟ್‌ ಮಾಡಿರುವ ಸಿ.ಟಿ ರವಿ, ‘ತಮಿಳುನಾಡು ನಗರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಉತ್ತಮ ಸಾಧನೆ ಮಾಡಿದ ಅಣ್ಣಾಮಲೈ ನೇತೃತ್ವದ ಬಿಜೆಪಿಗೆ ಹೃದಯ ಪೂರ್ವಕ ಅಭಿನಂದನೆಗಳು. ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಅಭಿವೃದ್ಧಿ ಕಾರ್ಯಗಳಲ್ಲಿ ಮತ್ತು ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಜೆ. ಪಿ. ನಡ್ಡಾ ಅವರ ನಾಯಕತ್ವದಲ್ಲಿ ವಿಶ್ವಾಸವಿರಿಸಿದ ತಮಿಳುನಾಡು ಜನರಿಗೆ ನಮನಗಳು’ ಎಂದು ಅವರು ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.

’ಕಾರ್ಯಕರ್ತರ ಪರಿಶ್ರಮದಿಂದ ಬಿಜೆಪಿಯು ತಮಿಳುನಾಡಿನಲ್ಲಿ ಮೂರನೇ ಯಶಸ್ವಿ ಪಕ್ಷವಾಗಿ ಹೊರಹೊಮ್ಮಿದೆ. ಜೆ.ಪಿ ನಡ್ಡಾ ಮತ್ತು ಅಣ್ಣಾಮಲೈಅವರ ನೇತೃತ್ವದಲ್ಲಿ ಬಿಜೆಪಿಯುತಮಿಳುನಾಡಿನಲ್ಲಿ ಜನಮನ್ನಣೆಯ ಪಕ್ಷವಾಗಲಿದೆ’ ಎಂದು ಹೇಳಿದ್ದಾರೆ.

ADVERTISEMENT

ಫೆ. 19ರಂದು ನಡೆದಿದ್ದ ತಮಿಳುನಾಡು ನಗರ ಸ್ಥಳೀಯ ಸಂಸ್ಥೆ ಚುನಾವಣೆಯ ಮತಎಣಿಕೆ ಮಂಗಳವಾರ ಆರಂಭವಾಯಿತು. ಮಧ್ಯಾಹ್ನ 1 ಗಂಟೆ ವರೆಗಿನ ಮಾಹಿತಿ ಪ್ರಕಾರ ಆಡಳಿತಾರೂಢ ಡಿಎಂಕೆ ಅತಿಹೆಚ್ಚು ಸ್ಥಾನಗಳನ್ನು ಗೆಲ್ಲುವ ಮೂಲಕ ಮುಂದಿದ್ದರೆ, ಬಿಜೆಪಿ ನಾಲ್ಕನೇ ಸ್ಥಾನದಲ್ಲಿ ಕಾಣಿಸಿಕೊಂಡಿದೆ.

ಡಿಎಂಕೆ ಪಕ್ಷವೊಂದೇ ಏಕಾಂಗಿಯಾಗಿ 213 ಮುನ್ಸಿಪಲ್ ಕಾರ್ಪೊರೇಷನ್ ವಾರ್ಡ್‌ಗಳು, 960 ಪುರಸಭೆ ವಾರ್ಡ್‌ಗಳು, 3,272 ಪಟ್ಟಣ ಪಂಚಾಯಿತಿ ಸ್ಥಾನಗಳನ್ನು ಗೆದ್ದುಕೊಂಡಿದೆ.

ಎಐಎಡಿಎಂಕೆ 38 ಮುನ್ಸಿಪಲ್ ಕಾರ್ಪೊರೇಷನ್ ವಾರ್ಡ್‌ಗಳು, 262 ಪುರಸಭೆ ವಾರ್ಡ್‌ಗಳು, 915 ಪಟ್ಟಣ ಪಂಚಾಯಿತಿ ವಾರ್ಡ್‌ಗಳನ್ನು ಗೆದ್ದಿದೆ.

ಕಾಂಗ್ರೆಸ್ 22 ಕಾರ್ಪೊರೇಷನ್ ವಾರ್ಡ್‌ಗಳು, 64 ಪುರಸಭೆ ವಾರ್ಡ್‌ಗಳು ಮತ್ತು 225 ಪಟ್ಟಣ ಪಂಚಾಯಿತಿ ಸ್ಥಾನಗಳಲ್ಲಿ ಗೆದ್ದಿದೆ.

ಬಿಜೆಪಿ 1 ಕಾರ್ಪೊರೇಷನ್‌ ವಾರ್ಡ್‌, 24 ಪುರಸಭೆ ವಾರ್ಡ್‌ ಮತ್ತು 102 ಪಟ್ಟಣ ಪಂಚಾಯಿತಿ ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ ಎಂದು ವರದಿಯಾಗಿದೆ.

2011ರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಗಳಿಸಿದ್ದಕ್ಕಿಂತ ಹೆಚ್ಚಿನ ಸ್ಥಾನಗಳನ್ನು ಬಿಜೆಪಿ ಈ ಬಾರಿ ಗೆದ್ದಿದೆ. ಹೆಚ್ಚಿನ ಸ್ಥಾನಗಳು ಕನ್ಯಾಕುಮಾರಿ ಜಿಲ್ಲೆಯಲ್ಲಿ ಲಭಿಸಿವೆ. ಅಲ್ಲಿ ಬಿಜೆಪಿ ತಕ್ಕಮಟ್ಟಿನ ಹಿಡಿತ ಹೊಂದಿದೆ. ನಾಥೂರಾಂ ಗೋಡ್ಸೆ ಪರ ವಿವಾದಾತ್ಮಕ ಹೇಳಿಕೆ ನೀಡಿದ್ದ ಉಮಾ ಆನಂದನ್ ಚೆನ್ನೈನಲ್ಲಿ ಗೆದ್ದಿದ್ದಾರೆ. ಈ ಮೂಲಕ ಗ್ರೇಟರ್ ಚೆನ್ನೈ ಕಾರ್ಪೊರೇಷನಲ್ಲಿ ಇದೇ ಮೊದಲ ಬಾರಿಗೆ ಪ್ರಾತಿನಿಧ್ಯ ಪಡೆದು ಅಚ್ಚರಿ ಮೂಡಿಸಿದೆ.

ಬಿಜೆಪಿಯ ರಾಜ್ಯ ಘಟಕದ ಅಧ್ಯಕ್ಷ ಕೆ ಅಣ್ಣಾಮಲೈ ಪಕ್ಷದ ಸಾಧನೆಯನ್ನು ಕೊಂಡಾಡಿದ್ದಾರೆ. ಪಕ್ಷ ಈ ಚುನಾವಣೆಯಲ್ಲಿ ಅಭೂತಪೂರ್ವ ಸಾಧನೆ ಮಾಡಿದೆ ಎಂದು ಬಣ್ಣಿಸಿದ್ದಾರೆ. ನಮಗೆ ಮೊದಲು ಪ್ರತಿನಿಧ್ಯವೇ ಇಲ್ಲದ ಕ್ಷೇತ್ರಗಳಲ್ಲೂ ಈ ಬಾರಿ ನಾವು ಗೆದ್ದಿದ್ದೇವೆ. ರಾಜ್ಯದಲ್ಲಿ ಡಿಎಂಕೆ ಮತ್ತು ಎಐಎಡಿಎಂಕೆ ನಂತರ ಬಿಜೆಪಿ ಮೂರನೇ ಅತಿದೊಡ್ಡ ಪಕ್ಷವಾಗಿದೆ ಹೊರಹೊಮ್ಮಿದೆ ಎಂದು ಅವರು ಹೇಳಿದ್ದಾರೆ.


ಡಿಎಂಕೆ ವಿರುದ್ಧ ಅಣ್ಣಾಮಲೈ ವಾಗ್ದಾಳಿ

ಫೆಬ್ರವರಿ 19 ರಂದು ನಗರ ಸ್ಥಳೀಯ ಸಂಸ್ಥೆ ಚುನಾವಣೆಗಳನ್ನು ಡಿಎಂಕೆ ಸರ್ಕಾರ ನಾಚಿಕೆ ಹುಟ್ಟಿಸುವಂತೆ ನಡೆಸಿತ್ತು. ಹಿಂಸಾಚಾರದ ಜೊತೆಗೆ ಅಧಿಕಾರದ ದುರುಪಯೋಗ ನಡೆದಿತ್ತು. ಬಿಜೆಪಿ ಇಂದು ಮದ್ರಾಸ್ ಹೈಕೋರ್ಟ್‌ಗೆ ಮೊರೆ ಹೋಗುತ್ತಿದ್ದು, ನಿರ್ದಿಷ್ಟ ಬೂತ್‌ಗಳಲ್ಲಿ ಮರು ಮತದಾನ ನಡೆಸಬೇಕೆಂದು ಕೋರಲಿದೆ ಎಂದು ತಮಿಳುನಾಡು ಬಿಜೆಪಿ ಘಟಕದ ಅಧ್ಯಕ್ಷ ಅಣ್ಣಾಮಲೈ ಹೇಳಿದ್ದಾರೆ. ಈ ಕುರಿತು ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ.

ಡಿಎಂಕೆ ಸದಸ್ಯರು ಮತಗಟ್ಟೆ ಹೊರಗೆ ನಿಂತಿದ್ದಕ್ಕೆ ಹೆದರಿ ಜನರು ಮತ ಚಲಾಯಿಸಲು ಹೊರಗೆ ಬರಲೇ ಇಲ್ಲ. ಮತದಾನದ ಪ್ರಮಾಣ ಶೇ 14ರಷ್ಟು ಕುಸಿದಿದೆ. ಕೇಂದ್ರ ಸಚಿವ ಎಲ್ ಮುರುಗನ್ ಅವರ ಮತವನ್ನು ಬೇರೆಯವರು ಚಲಾಯಿಸಿದ್ದಾರೆ. ನಾವು ಇದನ್ನು ಪ್ರತಿಭಟಿಸಿದ್ದೇವೆ. ನಂತರ ಅವರಿಗೆ ಮತದಾನ ಮಾಡಲು ಅವಕಾಶ ಮಾಡಿಕೊಡಲಾಯಿತು ಎಂದು ಅಣ್ಣಾಮಲೈ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.