ADVERTISEMENT

ರಾತ್ರಿ ಕರ್ಫ್ಯೂ, ಹಗಲು ಚುನಾವಣಾ ರ‍್ಯಾಲಿ; ಬಿಜೆಪಿ ವಿರುದ್ಧ ವರುಣ್ ಗಾಂಧಿ ಟೀಕೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 27 ಡಿಸೆಂಬರ್ 2021, 15:40 IST
Last Updated 27 ಡಿಸೆಂಬರ್ 2021, 15:40 IST
ವರುಣ್ ಗಾಂಧಿ
ವರುಣ್ ಗಾಂಧಿ   

ನವದೆಹಲಿ: ಬಿಜೆಪಿ ಸಂಸದ ವರುಣ್‌ ಗಾಂಧಿ ಅವರು ತಮ್ಮದೇ ಪಕ್ಷದ ವಿರುದ್ಧ ಮತ್ತೊಮ್ಮೆ ಹರಿಹಾಯ್ದಿದ್ದಾರೆ. ‘ರಾತ್ರಿ ಕರ್ಫ್ಯೂ ಹೇರುವುದು ಮತ್ತು ಹಗಲಿನಲ್ಲಿ ರ್‍ಯಾಲಿ ನಡೆಸಿ ಲಕ್ಷಾಂತರ ಜನರನ್ನು ಸೇರಿಸುವುದು ಸಾಮಾನ್ಯ ಜನರ ತರ್ಕಕ್ಕೆ ನಿಲುಕದು. ಉತ್ತರ ಪ್ರದೇಶದ ಆರೋಗ್ಯ ವ್ಯವಸ್ಥೆಯ ಸೀಮಿತ ಸಾಮರ್ಥ್ಯವನ್ನು ಗಣನೆಗೆ ತೆಗೆದುಕೊಂಡು, ಅಪಾಯಕಾರಿ ಓಮೈಕ್ರಾನ್‌ ಸೋಂಕು ಹರಡುವಿಕೆಯನ್ನು ತಡೆಯುವುದು ಮುಖ್ಯವೇ ಅಥವಾ ರಾಜಕೀಯ ಬಲ ಪ್ರದರ್ಶನ ಮುಖ್ಯವೇ ಎಂಬುದನ್ನು ಪ್ರಾಮಾಣಿಕವಾಗಿ ನಿರ್ಧರಿಸಬೇಕಿದೆ’ ಎಂದು ಅವರು ಹೇಳಿದ್ದಾರೆ.

ಕೋವಿಡ್‌–19 ಹರಡುವಿಕೆ ತಡೆಯುವ ಉದ್ದೇಶದಿಂದ ಇತ್ತೀಚಿನ ದಿನಗಳಲ್ಲಿ ರಾತ್ರಿ ಕರ್ಫ್ಯೂ ಹೇರಿರುವ ರಾಜ್ಯಗಳಲ್ಲಿ ಉತ್ತರ ಪ್ರದೇಶವೂ ಒಂದು.

ಸೋಂಕು ಗರಿಷ್ಠ ಮಟ್ಟದಲ್ಲಿ ಹರಡುವುದು ಹಗಲಿನಲ್ಲಿಯೇ ಹೊರತು ರಾತ್ರಿ ಅಲ್ಲ. ಏಕೆಂದರೆ ರಾತ್ರಿಯಲ್ಲಿರಸ್ತೆಯಲ್ಲಿ ಹೆಚ್ಚು ಜನಸಂಚಾರ ಇರುವುದಿಲ್ಲ. ಜನ ಸೇರುವಂತಹ ಕಾರ್ಯಕ್ರಮಗಳನ್ನು ಕಡಿಮೆ ಮಾಡಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು. ಇಲ್ಲದೇ ಇದ್ದರೆ ಕಾರ್ಯಕ್ರಮ ನಡೆದ ಸ್ಥಳಗಳು ಕೋವಿಡ್‌ ಕ್ಲಸ್ಟರ್‌ಗಳಾಗಬಹುದು ಎಂದು ವರುಣ್‌ ಹೇಳಿದ್ದಾರೆ.

ADVERTISEMENT

ಮಹಾರಾಷ್ಟ್ರ ಸರ್ಕಾರಕ್ಕೆ ಕೇಂದ್ರ ಸರ್ಕಾರವು 2021ರ ಮಾರ್ಚ್‌ನಲ್ಲಿ ಬರೆದ ಪತ್ರವೊಂದನ್ನು ವರುಣ್‌ ಉಲ್ಲೇಖಿಸಿದ್ದಾರೆ. ಕೋವಿಡ್‌ ಹರಡುವಿಕೆ ತಡೆಯಲು ರಾತ್ರಿ ಕರ್ಫ್ಯೂ ಮತ್ತು ವಾರಾಂತ್ಯ ಲಾಕ್‌ಡೌನ್‌ನಿಂದ ಹೆಚ್ಚಿನ ಉಪಯೋಗ ಆಗದು ಎಂದು ಈ ಪತ್ರದಲ್ಲಿ ಸೂಚಿಸಲಾಗಿತ್ತು ಎಂದು ಅವರು ಹೇಳಿದ್ದಾರೆ.‌

ರ್‍ಯಾಲಿಗಳನ್ನು ನಡೆಸುವುದನ್ನು ನಿಲ್ಲಿಸಬೇಕು ಎಂದು ಅಲಹಾಬಾದ್ ಹೈಕೋರ್ಟ್‌ನ ನ್ಯಾಯಮೂರ್ತಿ ಶೇಖರ್‌ ಕುಮಾರ್‌ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇತ್ತೀಚೆಗೆ ಮನವಿ ಮಾಡಿದ್ದರು.

ಉತ್ತರ ಪ್ರದೇಶ ಮತ್ತು ಕೇಂದ್ರದ ಬಿಜೆಪಿ ಸರ್ಕಾರಗಳನ್ನು ವರುಣ್‌ ಅವರು ಇತ್ತೀಚೆಗೆ ಕಟುವಾಗಿ ವಿಮರ್ಶೆಗೆ ಒಳಪಡಿಸುತ್ತಿದ್ದಾರೆ. ಕೃಷಿ ಕಾಯ್ದೆಗಳ ವಿಚಾರದಲ್ಲಿಯೂ ಅವರು ಸರ್ಕಾರವನ್ನು ಟೀಕಿಸಿದ್ದರು. ಲಖಿಂಪುರ ಖೇರಿಯಲ್ಲಿ ರೈತರ ಮೇಲೆ ಎಸ್‌ಯುವಿ ಹರಿಸಿದ ಪ್ರಕರಣದ ಮುಖ್ಯ ಆರೋಪಿ ಆಶಿಶ್‌ ಮಿಶ್ರಾ ಅವರ ತಂದೆ ಕೇಂದ್ರ ಸಚಿವ ಅಜಯ್‌ ಮಿಶ್ರಾ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದೂ ಆಗ್ರಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.