ADVERTISEMENT

ಮಹಾರಾಷ್ಟ್ರದ ಅಮರಾವತಿಯಲ್ಲಿ ಹಿಂಸಾಚಾರ: ನಾಲ್ಕು ಪಟ್ಟಣಗಳಿಗೆ ಕರ್ಫ್ಯೂ ವಿಸ್ತರಣೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 15 ನವೆಂಬರ್ 2021, 7:07 IST
Last Updated 15 ನವೆಂಬರ್ 2021, 7:07 IST
ಅಮರಾವತಿ ಬಂದ್ ವೇಳೆ, ಹಿಂಸಾಚಾರದಲ್ಲಿ ತೊಡಗಿರುವ ಯುವಕರ ಗುಂಪು –ಪಿಟಿಐ ಚಿತ್ರ
ಅಮರಾವತಿ ಬಂದ್ ವೇಳೆ, ಹಿಂಸಾಚಾರದಲ್ಲಿ ತೊಡಗಿರುವ ಯುವಕರ ಗುಂಪು –ಪಿಟಿಐ ಚಿತ್ರ   

ಅಮರಾವತಿ: ಕಲ್ಲು ತೂರಾಟ ಮತ್ತು ಹಿಂಸಾಚಾರ ಪ್ರಕರಣಗಳ ಹಿನ್ನೆಲೆಯಲ್ಲಿ ನಗರದಲ್ಲಿ ಹೇರಲಾಗಿರುವ ಕರ್ಫ್ಯೂ ಅನ್ನು, ಜಿಲ್ಲೆಯ ಇನ್ನೂ ನಾಲ್ಕು ಪಟ್ಟಣಗಳಿಗೆ ವಿಸ್ತರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಮರಾವತಿಯಲ್ಲಿ ಶುಕ್ರವಾರ ಮತ್ತು ಶನಿವಾರ ವರದಿಯಾದ ಕಲ್ಲು ತೂರಾಟ ಪ್ರಕರಣಗಳಿಗೆ ಸಂಬಂಧಿಸಿದಂತೆ ಇದುವರೆಗೆ ಒಟ್ಟು 50 ಜನರನ್ನು ಬಂಧಿಸಲಾಗಿದೆ.

ರಾಜ್ಯ ಮೀಸಲು ಪೊಲೀಸ್ ಪಡೆಯ (ಎಸ್‌ಆರ್‌ಪಿಎಫ್‌) ಎಂಟು ಬೆಟಾಲಿಯನ್‌ ಮತ್ತು ವಿವಿಧ ಜಿಲ್ಲೆಗಳ ಪೊಲೀಸ್ ಸಿಬ್ಬಂದಿಯನ್ನು ಅಮರಾವತಿಗೆ ನಿಯೋಜಿಸಲಾಗಿದ್ದು, ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವೆ ಯಶೋಮತಿ ಠಾಕೂರ್ ತಿಳಿಸಿದ್ದಾರೆ.

ADVERTISEMENT

ತ್ರಿಪುರಾದಲ್ಲಿನ ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯ ಖಂಡಿಸಿ ಮುಸ್ಲಿಂ ಸಂಘಟನೆಗಳು ಅಮರಾವತಿಯಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದ್ದವು. ಈ ಸಮಯದಲ್ಲಿ ಕಲ್ಲುತೂರಾಟ ಹಾಗೂ ಹಿಂಸಾಚಾರ ನಡೆದಿತ್ತು.ನಾಂದೇಡ್, ಮಾಲೆಗಾಂವ್, ವಾಶಿಮ್ ಮತ್ತು ಯವತ್ಮಾಲ್ ಜಿಲ್ಲೆಗಳಲ್ಲೂ ಈ ಘಟನೆ ವರದಿಯಾಗಿದ್ದವು.ಇದನ್ನು ಖಂಡಿಸಿ ಬಿಜೆಪಿ ಶನಿವಾರ ಬಂದ್‌ಗೆ ಕರೆ ನೀಡಿತ್ತು.ಇದರ ಹಿನ್ನೆಲೆಯಲ್ಲಿ ಪ್ರತಿಭಟನಾಕಾರರು ನಗರದ ರಾಜಕಮಲ್ ಚೌಕದಲ್ಲಿ ಕೇಸರಿ ಧ್ವಜ ಹಿಡಿದು ಘೋಷಣೆಗಳನ್ನು ಕೂಗಿದ್ದರು. ಈ ವೇಳೆ ಮತ್ತೆ ಕಲ್ಲು ತೂರಾಟ ನಡೆದಿದೆ. ಪರಿಸ್ಥಿತಿಯನ್ನು ಹತೋಟಿಗೆ ತರಲು ಪೊಲೀಸರು ಲಾಠಿ ಪ್ರಹಾರ ನಡೆಸಿದ್ದಾರೆ.ಕಲ್ಲು ತೂರಾಟದಿಂದ ಹಲವು ಅಂಗಡಿಗಳಿಗೆ ಹಾನಿಯಾಗಿದೆಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದರು.

ಅಮರಾವತಿಯಲ್ಲಿ ಶನಿವಾರದಿಂದ ನಾಲ್ಕು ದಿನಗಳ ವರೆಗೆ ಕರ್ಫ್ಯೂ ಹೇರಲಾಗಿದ್ದು, ಇಂಟರ್‌ನೆಟ್ ಸೇವೆಯನ್ನೂ ಸ್ಥಗಿತಗೊಳಿಸಲಾಗಿದೆ.ಸದ್ಯ ಜಿಲ್ಲೆಯ ಮೋರ್ಷಿ, ವರುದ್, ಅಚಲಪುರ್ ಮತ್ತು ಅಂಜನಾಗಾಂವ್ ಸುರ್ಜಿ ಪಟ್ಟಣಗಳಿಗೆ ಕರ್ಫ್ಯೂ ವಿಸ್ತರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.