ADVERTISEMENT

ತೌತೆ ಚಂಡಮಾರುತದ ಬೆನ್ನಲ್ಲೇ ಅಪ್ಪಳಿಸಲಿದೆ 'ಯಾಸ್‌' ಚಂಡಮಾರುತ

ಏಜೆನ್ಸೀಸ್
Published 19 ಮೇ 2021, 6:20 IST
Last Updated 19 ಮೇ 2021, 6:20 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ನವದೆಹಲಿ: ಭಾರತದ ಪಶ್ಚಿಮ ಕರಾವಳಿ ಭಾಗದಲ್ಲಿ ತೌತೆ ಚಂಡಮಾರುತ ತೀವ್ರ ಹಾನಿ ಮಾಡುತ್ತಿದೆ. ಇದರ ಬೆನ್ನಲ್ಲೇ ಮತ್ತೊಂದು ಚಂಡಮಾರುತವು ದೇಶದ ಪೂರ್ವ ಹಾಗೂ ದಕ್ಷಿಣ ಕರಾವಳಿ ಭಾಗಗಳಿಗೆ ಅಪ್ಪಳಿಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮನ್ಸೂಚನೆ ನೀಡಿದೆ.

ಮೇ 23ರ ಸುಮಾರಿಗೆ ಬಂಗಾಳ ಕೊಲ್ಲಿಯಲ್ಲಿ ಸೃಷ್ಟಿಯಾಗಲಿರುವ ಚಂಡಮಾರುತಕ್ಕೆ 'ಯಾಸ್‌' ಎಂದು ಹೆಸರಿಡಲಾಗಿದೆ.

ಈ ವಿಚಾರವಾಗಿ ಮಾಹಿತಿ ನೀಡಿರುವ ಹವಾಮಾನ ಇಲಾಖೆಯ ಚಂಡಮಾರುತ ವಿಭಾಗದ ಮುಖ್ಯಸ್ಥೆ ಸುನೀತಾ ದೇವಿ, 'ಮುಂದಿನ ವಾರ ಬಂಗಾಳ ಕೊಲ್ಲಿಯಲ್ಲಿ ಕಡಿಮೆ ಒತ್ತಡದ ಪ್ರದೇಶ ನಿರ್ಮಾಣವಾಗಬಹುದು. ಇದು ತೀವ್ರಗೊಳ್ಳುವ ಸಾಧ್ಯತೆಯೂ ಇದೆ ಎಂದು ನಾವು ಸೂಚಿಸಿದ್ದೇವೆ. ಆ ಹಿನ್ನೆಲೆಯಲ್ಲಿ ದೇಶದ ಪೂರ್ವ ಹಾಗೂ ದಕ್ಷಿಣ ಕರಾವಳಿ ಭಾಗಗಳಲ್ಲಿ ಚಂಡಮಾರುತ ಕಾಣಿಸಿಕೊಳ್ಳಬಹುದು. ಮುಂದಿನ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸಿದ ತಕ್ಷಣ ಮುನ್ಸೂಚನೆಗಳನ್ನು ನೀಡಲಿದ್ದೇವೆ' ಎಂದು ತಿಳಿಸಿದ್ದಾರೆ.

ADVERTISEMENT

'ಬಂಗಾಳ ಕೊಲ್ಲಿಯಲ್ಲಿ ಆಗುತ್ತಿರುವ ಬದಲಾವಣೆಗಳು ವಾಯುಭಾರ ಕುಸಿತ ಮತ್ತು ಚಂಡಮಾರುತವನ್ನು ಸೃಷ್ಟಿಸಬಹುದು. ಆದರೆ, ಈಗ ನಡೆಯುತ್ತಿರುವ ಬೆಳವಣಿಗೆಗಳನ್ನು ಗಮನಿಸಿದರೆ ಚಂಡಮಾರುತವು ಮ್ಯಾನ್ಮಾರ್‌ನತ್ತ ಚಲಿಸುವ ಸಾಧ್ಯತೆ ಹೆಚ್ಚಿದ್ದು, ಭಾರತದ ಕರಾವಳಿಯತ್ತ ಸಾಗುವ ಲಕ್ಷಣಗಳಿಲ್ಲ' ಎಂದು ಹವಾಮಾನ ತಜ್ಞ ಮಹೇಶ್‌ ಪಲಾವಟ್‌ ತಿಳಿಸಿದ್ದಾರೆ.

ತೌತೆ ಚಂಡಮಾರುತವು ಮಹಾರಾಷ್ಟ್ರ ಮತ್ತು ಗುಜರಾತ್‌ನಲ್ಲಿ ಭಾರಿ ಅನಾಹುತ ಸೃಷ್ಟಿಸಿದೆ. ಎರಡೂ ರಾಜ್ಯಗಳಲ್ಲಿ ಒಟ್ಟು 33 ಮಂದಿ ಮೃತಪಟ್ಟಿದ್ದಾರೆ. 90ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದಾರೆ. ತೌತೆ ಚಂಡಮಾರುತವು ಇತ್ತೀಚಿನ ದಶಕಗಳಲ್ಲಿಯೇ ಅತ್ಯಂತ ತೀವ್ರವಾದುದಾಗಿತ್ತು. ಆದರೆ, ಅತ್ಯುತ್ತಮ ಮುನ್ಸೂಚನೆ ವ್ಯವಸ್ಥೆಯಿಂದಾಗಿ ಅಪಾಯದ ಪ್ರದೇಶದಲ್ಲಿದ್ದ ಸುಮಾರು ಎರಡು ಲಕ್ಷ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿತ್ತು. ಹಾಗಾಗಿ, ಸಾವು ನೋವಿನ ಪ್ರಮಾಣ ಗಣನೀಯವಾಗಿ ತಗ್ಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.