ADVERTISEMENT

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ: ಮೋದಿ ಭೇಟಿಗೂ ಮುನ್ನ ಒಡಿಶಾದಲ್ಲಿ ಭಾರಿ ಮಳೆ

ಪಿಟಿಐ
Published 27 ಸೆಪ್ಟೆಂಬರ್ 2025, 5:47 IST
Last Updated 27 ಸೆಪ್ಟೆಂಬರ್ 2025, 5:47 IST
<div class="paragraphs"><p>ಒಡಿಶಾದಲ್ಲಿ ಮಳೆ ಹಾಗೂ ಪ್ರಧಾನಿ ನರೇಂದ್ರ ಮೋದಿ (ಸಂಗ್ರಹ ಚಿತ್ರಗಳು)</p></div>

ಒಡಿಶಾದಲ್ಲಿ ಮಳೆ ಹಾಗೂ ಪ್ರಧಾನಿ ನರೇಂದ್ರ ಮೋದಿ (ಸಂಗ್ರಹ ಚಿತ್ರಗಳು)

   

ಕೃಪೆ: ಪಿಟಿಐ

ಭುವನೇಶ್ವರ: ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತವು ಗಂಜಾಂ ಜಿಲ್ಲೆಯ ಗೋಪಾಲಪುರ ಸಮೀಪ ದಕ್ಷಿಣ ಒಡಿಶಾ ಕರಾವಳಿಯನ್ನು ದಾಟಿದ್ದು, ರಾಜ್ಯದ ಹಲವು ಜಿಲ್ಲೆಗಳಲ್ಲಿ ಶನಿವಾರ ಬೆಳಿಗ್ಗೆ ಭಾರೀ ಮಳೆಯಾಗಿದೆ ಎಂದು ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ಇಂದು (ಶನಿವಾರ) ಒಡಿಶಾಗೆ ಭೇಟಿ ನೀಡಲಿದ್ದು, ದೂರಸಂಪರ್ಕ, ರೈಲ್ವೆ, ಶಿಕ್ಷಣ ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ಸಂಬಂಧಿಸಿದ ಸುಮಾರು ₹ 60,000 ಕೋಟಿ ಮೊತ್ತದ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಧಾನಿ ಮೋದಿಯವರ ಸಾರ್ವಜನಿಕ ಸಮಾವೇಶಕ್ಕೆ ಆರಂಭದಲ್ಲಿ ಗಂಜಾಂ ಜಿಲ್ಲೆಯ ಬೆರ್ಹಮ್‌ಪುರದಲ್ಲಿ ಸ್ಥಳ ನಿಗದಿಯಾಗಿತ್ತು. ಆದರೆ, ಆ ಭಾಗದಲ್ಲಿ ಶನಿವಾರ ಭಾರಿ ಮಳೆಯಾಗಲಿದೆ ಎಂಬ ಮುನ್ಸೂಚನೆ ಇದ್ದ ಕಾರಣ ಝಾರ್ಸುಗುಡಕ್ಕೆ ಕಾರ್ಯಕ್ರಮ ಸ್ಥಳಾಂತರಿಸಲಾಗಿದೆ. ಆದಾಗ್ಯೂ, ಗುಡುಗು, ಸಿಡಿಲು ಸಹಿತ ಭಾರಿ ಮಳೆಯಾಗಲಿದೆ ಎಂಬುದಾಗಿ ಐಎಂಡಿ ಮುನ್ನೆಚ್ಚರಿಕೆ ನೀಡಿರುವ 9 ಜಿಲ್ಲೆಗಳಲ್ಲಿ ಝಾರ್ಸುಗುಡವೂ ಒಂದಾಗಿದೆ.

'ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತವು ಕಳೆದ 6 ತಾಸಿನಲ್ಲಿ ಗಂಟೆಗೆ 12 ಕಿ.ಮೀ. ವೇಗದಲ್ಲಿ ಪಶ್ಚಿಮದತ್ತ ಸಾಗಿ, ಶನಿವಾರ ಮುಂಜಾನೆ 4.30ರ ಹೊತ್ತಿಗೆ ಗೋಪಾಲ್‌ಪುರ ಸಮೀಪ ಒಡಿಶಾ ಕರಾವಳಿಯನ್ನು ದಾಟಿದೆ' ಎಂದು ಐಎಂಡಿ ಹೇಳಿದೆ.

ಸಂಪೂರ್ಣ ಕರಾವಳಿ ಪ್ರದೇಶ ಹಾಗೂ ರಾಜ್ಯದ ದಕ್ಷಿಣ ಭಾಗಗಳಲ್ಲಿ ಶುಕ್ರವಾರ ರಾತ್ರಿಯಿಡೀ ಭಾರಿ ಮಳೆಯಾಗಿದೆ. ಶನಿವಾರ ಬೆಳಿಗ್ಗೆಯೂ ಅದು ಮುಂದುವರಿದಿದೆ ಎಂದು ಐಎಂಡಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮಧ್ಯಾಹ್ನದ ವರೆಗೆ ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಎಚ್ಚರಿಕೆ ನೀಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.