ADVERTISEMENT

ತಮಿಳುನಾಡಿನಲ್ಲಿ ಫೆಂಜಲ್‌ ಆರ್ಭಟ: ರಸ್ತೆಗಳು ಜಲಾವೃತ, ತೇಲಿಹೋದ ವಾಹನಗಳು

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2024, 16:19 IST
Last Updated 2 ಡಿಸೆಂಬರ್ 2024, 16:19 IST
   

ವಿಲ್ಲುಪುರಂ: ಫೆಂಜಲ್‌ ಚಂಡಮಾರುತದ ಪರಿಣಾಮ, ಉತ್ತರ ತಮಿಳುನಾಡಿನ ವಿಲ್ಲುಪುರಂನಲ್ಲಿ ಸೋಮವಾರ ನಿರಂತರವಾಗಿ ಮಳೆ ಸುರಿದಿದ್ದರಿಂದ ಪ್ರವಾಹ ಪರಿಸ್ಥಿತಿ ಉಂಟಾಗಿದೆ.

ಸೇತುವೆಗಳು ಮತ್ತು ರಸ್ತೆಗಳು ಜಲಾವೃತವಾಗಿದ್ದು ಹಲವು ಗ್ರಾಮಗಳು ಮತ್ತು ಕಾಲೊನಿಗಳು ಸಂಪರ್ಕ ಕಳೆದುಕೊಂಡಿವೆ.

ನೂರಾರು ಎಕರೆ ಕೃಷಿ ಭೂಮಿ ನೀರಿನಲ್ಲಿ ಮುಳುಗಿ, ಅಪಾರ ಪ್ರಮಾಣದ ಬೆಳೆ ಹಾನಿಗೊಳಗಾಗಿದೆ.

ADVERTISEMENT

ಪಶ್ಚಿಮ ತಮಿಳುನಾಡಿನ ಕೃಷ್ಣಗಿರಿ ಮತ್ತು ಧರ್ಮಪುರಿ ಜಿಲ್ಲೆಗಳಲ್ಲೂ ಕಳೆದ ಎರಡು ದಶಕಗಳಲ್ಲಿ ಕಂಡುಕೇಳರಿಯದ ಮಳೆ ಸುರಿದಿದೆ. 24 ತಾಸುಗಳಲ್ಲಿ ಕೃಷ್ಣಗಿರಿಯ ಉತಂಗರೈನಲ್ಲಿ 50 ಸೆಂಟಿ ಮೀಟರ್‌ನಷ್ಟು ಮಳೆಯಾಗಿದೆ. ವೆಲ್ಲುಪುರಂನಲ್ಲಿ 42 ಸೆ.ಮೀ, ಧರ್ಮಪುರಿಯ ಹರೂರಿನಲ್ಲಿ 33 ಸೆ.ಮೀ, ಕಡಲೂರು ಮತ್ತು ತಿರುವಣ್ಣಾಮಲೈನಲ್ಲಿ ದಾಖಲೆಯ 16 ಸೆ.ಮೀ ಮಳೆಯಾಗಿದೆ.

ಉತಂಗರೈನಲ್ಲಿ ರಸ್ತೆ ಬದಿ ನಿಲ್ಲಿಸಿದ್ದ ಕಾರು ಮತ್ತು ವ್ಯಾನ್‌ಗಳು ಸೇರಿದಂತೆ ಹಲವು ವಾಹನಗಳು ನೀರಿನ ರಭಸಕ್ಕೆ ತಗ್ಗು ಪ್ರದೇಶದತ್ತ ತೇಲಿಹೋಗಿವೆ.

 ಕೇರಳಕ್ಕೆ ರೆಡ್‌ ಅಲರ್ಟ್‌:

ತಿರುವನಂತಪುರ: ಕೇರಳದಲ್ಲಿ ಮಂಗಳವಾರ ಭಾರಿ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮುನ್ಸೂಚನೆ ನೀಡಿದೆ.

ಸೋಮವಾರ ಕೇರಳದ ಹಲವೆಡೆ ಸಾಧಾರಣ ಮಳೆಯಾಗಿದೆ. ಉತ್ತರ ಮತ್ತು ಕೇಂದ್ರದ ಹಲವು ಪ್ರದೇಶಗಳಲ್ಲಿ ಮಂಗಳವಾರ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಮುಂದಿನ ಐದು ದಿನ ಈ ಭಾಗದಲ್ಲಿ ಗುಡುಗು ಸಹಿತ ಸಾಧರಣ ಮಳೆ ಮುಂದುವರಿಯಲಿದೆ ಎಂದು ತಿಳಿಸಿದೆ.

ಕೇರಳದ ಐದು ಜಿಲ್ಲೆಗಳಲ್ಲಿ ರೆಡ್‌ ಅಲರ್ಟ್‌, ನಾಲ್ಕು ಜಿಲ್ಲೆಗಳಿಗೆ ಯೆಲ್ಲೊ ಅಲರ್ಟ್‌ ಘೋಷಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.