ADVERTISEMENT

ಚಂಡಮಾರುತ: ಆಂಧ್ರ, ತಮಿಳುನಾಡಿಗೆ ಮುಂಗಡವಾಗಿ ನೆರವು ಒದಗಿಸುವಂತೆ ಮೋದಿ ಸೂಚನೆ

ಪಿಟಿಐ
Published 7 ಡಿಸೆಂಬರ್ 2023, 9:45 IST
Last Updated 7 ಡಿಸೆಂಬರ್ 2023, 9:45 IST
<div class="paragraphs"><p>ಪ್ರಧಾನಿ ನರೇಂದ್ರ ಮೋದಿ</p></div>

ಪ್ರಧಾನಿ ನರೇಂದ್ರ ಮೋದಿ

   

ನವದೆಹಲಿ: ಮಿಚಾಂಗ್‌ ಚಂಡಮಾರುತದಿಂದ ತತ್ತರಿಸಿರುವ ತಮಿಳುನಾಡು ಹಾಗೂ ಆಂದ್ರ ಪ್ರದೇಶ ರಾಜ್ಯಗಳ ವಿಪತ್ತು ನಿರ್ವಹಣಾ ಪಡೆಗಳಿಗೆ (ಎಸ್‌ಡಿಆರ್‌ಎಫ್‌) ಕೇಂದ್ರದ ನೆರವನ್ನು ಮುಂಗಡವಾಗಿ ಒದಗಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಗೃಹ ಸಚಿವಾಲಯಕ್ಕೆ ಸೂಚಿಸಿದ್ದಾರೆ.

ಈ ಮಾಹಿತಿಯನ್ನು ಹಂಚಿಕೊಂಡಿರುವ ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಆಂಧ್ರ ಪ್ರದೇಶ ಎಸ್‌ಡಿಆರ್‌ಎಫ್‌ಗೆ ₹ 493.60 ಕೋಟಿ ಮತ್ತು ತಮಿಳುನಾಡು ಎಸ್‌ಡಿಆರ್‌ಎಫ್‌ಗೆ ₹ 450 ಕೋಟಿ ಬಿಡುಗಡೆ ಮಾಡುವಂತೆ ಪ್ರಧಾನಿ ನಿರ್ದೇಶಿಸಿದ್ದಾರೆ. ಕೇಂದ್ರವು ಮೊದಲ ಕಂತಿನಲ್ಲೂ ಇಷ್ಟೇ ಮೊತ್ತವನ್ನು ಬಿಡುಗಡೆ ಮಾಡಿದೆ ಎಂದಿದ್ದಾರೆ.

ADVERTISEMENT

ತಮ್ಮ ಎಕ್ಸ್‌ (ಟ್ವಿಟರ್‌) ಖಾತೆಯಲ್ಲಿ ಪೋಸ್ಟ್‌ ಮಾಡಿರುವ ಶಾ, ರಾಷ್ಟ್ರೀಯ ವಿಪತ್ತು ನಿಯಂತ್ರಣ ನಿಧಿ (ಎನ್‌ಡಿಎಂಎಫ್‌) ಅಡಿಯಲ್ಲಿ ಚೆನ್ನೈನ ಜಲಾನಯನ ಪ್ರದೇಶಗಳಲ್ಲಿನ ಪ್ರವಾಹ ನಿರ್ವಹಣೆ ಚಟುವಟಿಕೆಗಳಿಗಾಗಿ ನಗರದ ಪ್ರವಾಹ ನಿಯಂತ್ರಣದ ಸಲುವಾಗಿನ ಮೊದಲ ಯೋಜನೆಗೂ ₹ 561.29 ಕೋಟಿ ಒದಗಿಸಲು ಅನುಮೋದಿಸಿದ್ದಾರೆ ಎಂದು ತಿಳಿಸಿದ್ದಾರೆ.

ಚಂಡಮಾರುತವು ಉಭಯ ರಾಜ್ಯಗಳಲ್ಲಿ ಅಪಾರ ಹಾನಿಯನ್ನುಂಟುಮಾಡಿದೆ. ನಷ್ಟ ಪ್ರಮಾಣ ಇನ್ನೂ ಹೆಚ್ಚುವ ಸಾಧ್ಯತೆ ಇದೆ ಎಂದು ಕಳವಳ ವ್ಯಕ್ತಪಡಿಸಿರುವ ಅವರು, ಸಂತ್ರಸ್ತರ ಸುರಕ್ಷತೆಗಾಗಿ ಪ್ರಾರ್ಥಿಸುತ್ತೇನೆ. ಇಂತಹ ಕಠಿಣ ಸಂದರ್ಭದಲ್ಲಿ ನಾವೆಲ್ಲ ಅವರೊಂದಿಗೆ ಇದ್ದೇವೆ. ಸಾಧ್ಯವಾದಷ್ಟು ಬೇಗನೆ ಪರಿಸ್ಥಿತಿ ಸಹಜಸ್ಥಿತಿಗೆ ಮರಳಲಿದೆ ಎಂಬ ಭರವಸೆ ಇದೆ ಎಂದಿದ್ದಾರೆ.

ಆಂಧ್ರ ಪ್ರದೇಶದಲ್ಲಿ ಚಂಡಮಾರುತದಿಂದಾಗಿ ಸುಮಾರು 770 ಕಿ.ಮೀ ರಸ್ತೆಗೆ ಹಾನಿಯಾಗಿದೆ. ಮುಖ್ಯಮಂತ್ರಿ ಕಚೇರಿ ಬಿಡುಗಡೆ ಮಾಡಿರುವ ಅಂಕಿ–ಅಂಶಗಳ ಪ್ರಕಾರ, ಸುಮಾರು 25 ಹಳ್ಳಿಗಳು ಮುಳುಗಡೆಯಾಗಿವೆ. ಎರಡು ಪಟ್ಟಣ ಮತ್ತು 194 ಹಳ್ಳಿಗಳ 40 ಲಕ್ಷ ಜನರು ತತ್ತರಿಸಿದ್ದಾರೆ.

ತಮಿಳುನಾಡು ರಾಜಧಾನಿ ಚೆನ್ನೈನ ಹಲವು ಪ್ರದೇಶಗಳು ಜಲಾವೃತವಾಗಿವೆ. ಹಲವು ಕಡೆ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ತಮಿಳುನಾಡು ಸರ್ಕಾರ ಕೇಂದ್ರದಿಂದ ಈಗಾಗಲೇ ₹ 5,060 ಕೋಟಿ ನೆರವು ಕೋರಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.