ADVERTISEMENT

ನಾಳೆ ಆಂಧ್ರಪ್ರದೇಶಕ್ಕೆ ಅಪ್ಪಳಿಸಲಿದೆ ಮೊಂಥಾ ಚಂಡಮಾರುತ

ಪಿಟಿಐ
Published 27 ಅಕ್ಟೋಬರ್ 2025, 14:19 IST
Last Updated 27 ಅಕ್ಟೋಬರ್ 2025, 14:19 IST
<div class="paragraphs"><p>ಮೊಂಥಾ ಚಂಡಮಾರುತ ಎದ್ದಿರುವ ಕಾರಣ ಚೆನ್ನೈನ ಮರೀನಾ ಬೀಚ್‌ನಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಮೀನುಗಾರರ ದೋಣಿಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಯಿತು</p></div>

ಮೊಂಥಾ ಚಂಡಮಾರುತ ಎದ್ದಿರುವ ಕಾರಣ ಚೆನ್ನೈನ ಮರೀನಾ ಬೀಚ್‌ನಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಮೀನುಗಾರರ ದೋಣಿಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಯಿತು

   

–ಪಿಟಿಐ ಚಿತ್ರ

ಹೈದರಾಬಾದ್‌: ಬಂಗಾಳ ಕೊಲ್ಲಿಯಲ್ಲಿ ಎದ್ದಿರುವ ‘ಮೊಂಥಾ’ ಚಂಡಮಾರುತವು ಮಂಗಳವಾರ ಆಂಧ್ರ ಪ್ರದೇಶದ ಕರಾವಳಿಗೆ ಅಪ್ಪಳಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಸೋಮವಾರ ಮುನ್ಸೂಚನೆ ನೀಡಿದೆ. ಮೊಂಥಾದ ಪ್ರಭಾವವು ತಮಿಳುನಾಡು, ಒಡಿಶಾ, ಪಶ್ಚಿಮ ಬಂಗಾಳದ ಮೇಲೂ ಆಗಲಿದೆ ಎಂದಿದೆ.

ADVERTISEMENT

ಆಂಧ್ರ ಪ್ರದೇಶ ಹಾಗೂ ಒಡಿಶಾ ಸರ್ಕಾರಗಳು ಮುನ್ನೆಚ್ಚರಿಕಾ ಕ್ರಮವಾಗಿ ಹಲವು ಸಿದ್ಧತೆಗಳನ್ನು ಮಾಡಿಕೊಂಡಿವೆ. ಆಂಧ್ರ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಸಿದ್ಧತಾ ಕಾರ್ಯಗಳ ಬಗ್ಗೆ ಅಧಿಕಾರಿಗಳ ಜೊತೆ ಸಭೆ ನಡೆಸಿದರು. ಕೇಂದ್ರ ಸರ್ಕಾರದಿಂದ ಎಲ್ಲ ರೀತಿಯ ಸಹಕಾರ ನೀಡುವುದಾಗಿ ಪ್ರಧಾನಿ ನರೇಂದ್ರ ಮೋದಿ ಅವರು ನಾಯ್ಡು ಅವರಿಗೆ ಭರವಸೆ ನೀಡಿದ್ದಾರೆ.

ಪ್ರತಿ ಗಂಟೆಗೆ 90 ಕಿ.ಮೀನಿಂದ 100 ಕಿ.ಮೀವರೆಗೂ ಗಾಳಿ ಬೀಸಲಿದೆ. ಗಾಳಿಯ ವೇಗವು ಗಂಟೆಗೆ 110 ಕಿ.ಮೀವರೆಗೂ ತಲುಪಬಹುದು ಎಂದು ಇಲಾಖೆ ಅಂದಾಜಿಸಿದೆ. ಚಂಡಮಾರುತದ ಪ್ರಭಾವವು ಆಂಧ್ರ ಪ್ರದೇಶದಲ್ಲಿ ಈಗಾಗಲೇ ಆರಂಭವಾಗಿದ್ದು, ಸೋಮವಾರ ಬೆಳಿಗ್ಗೆಯಿಂದ ಕರಾವಳಿ ಭಾಗದಲ್ಲಿ ಮಳೆಯಾಗುತ್ತಿದೆ. ಮಂಗಳವಾರದಿಂದ ಶುಕ್ರವಾರದವರೆಗೆ ಪಶ್ಚಿಮ ಬಂಗಾಳದಲ್ಲಿ ಮಳೆಯಾಗಲಿದೆ ಎಂದು ಇಲಾಖೆ ಮುನ್ಸೂಚನೆ ನೀಡಿದೆ.

ಒಡಿಶಾದ ದಕ್ಷಿಣ ಭಾಗದ ಎಂಟು ಜಿಲ್ಲೆಗಳಲ್ಲಿ ಹವಾಮಾನ ಇಲಾಖೆಯು ರೆಡ್‌ ಅಲರ್ಟ್‌ ಘೋಷಿಸಿದೆ. ಈ ಭಾಗದ ಜನರನ್ನು ಸ್ಥಳಾಂತರಿಸುವ ಕಾರ್ಯವನ್ನು ಸರ್ಕಾರ ಆರಂಭಿಸಿದೆ. ಆಂಧ್ರದಲ್ಲಿ ಸರ್ಕಾರಿ ನೌಕಕರ ರಜೆಗಳನ್ನು ರದ್ದು ಮಾಡಲಾಗಿದ್ದು, ಮುನ್ನೆಚ್ಚರಿಕಾ ಕಾರ್ಯದಲ್ಲಿ ತೊಡಗಿಕೊಳ್ಳುವಂತೆ ಮುಖ್ಯಮಂತ್ರಿ ನಾಯ್ಡು ಸೂಚಿಸಿದ್ದಾರೆ. 

ಮುಂದಿನ ಎರಡು ದಿನಗಳಲ್ಲಿ ತೆಲಂಗಾಣದ ಕೆಲವು ಪ್ರದೇಶಗಳಲ್ಲಿಯೂ ಭಾರಿ ಮಳೆಯಾಗಲಿದೆ.

ಮೊಂಥಾ ಎಂದರೆ?: ಥಾಯ್‌ ಭಾಷೆಯಲ್ಲಿ ಮೊಂಥಾ ಎಂದರೆ ಸುಂದರ ಹೂವು ಅಥವಾ ಸುವಾಸನೆ ಭರಿತ ಹೂವು ಎಂದರ್ಥ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.