ADVERTISEMENT

ಚಂಡಮಾರುತಗಳಲ್ಲಿ ಎಷ್ಟು ವಿಧ? ವರ್ಗೀಕರಿಸುವ ಮಾನದಂಡವೇನು? ಉತ್ತರ ಇಲ್ಲಿದೆ

​ಪ್ರಜಾವಾಣಿ ವಾರ್ತೆ
Published 23 ಮೇ 2021, 11:51 IST
Last Updated 23 ಮೇ 2021, 11:51 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಕಳೆದ ವಾರ ಭಾರತದ ಪಶ್ಚಿಮ ಕರಾವಳಿ ಭಾಗಕ್ಕೆ ಅಪ್ಪಳಿಸಿದ್ದ ತೌತೆ ಚಂಡಮಾರುತವು ಹಲವು ಅನಾಹುತಗಳನ್ನೇ ಸೃಷ್ಟಿಸಿದೆ. ಇದರ ಬೆನ್ನಲ್ಲೇ ದೇಶದ ಪೂರ್ವ ಕರಾವಳಿಗೆ 'ಯಸ್‌' ಚಂಡಮಾರುತವು ಅಪ್ಪಳಿಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಪೂರ್ವ ಮತ್ತು ಮಧ್ಯ ಬಂಗಾಳಕೊಲ್ಲಿಯಲ್ಲಿ ಕಡಿಮೆ ಒತ್ತಡದ ಪ್ರದೇಶ ಸೃಷ್ಟಿಯಾಗಿದೆ. ಇದು 'ತೀವ್ರ ಚಂಡಮಾರುತ'ವಾಗಿ ರೂಪುಗೊಳ್ಳುವ ಸಾಧ್ಯತೆ ಇದೆ. ಇದನ್ನು 'ಯಸ್‌' ಚಂಡಮಾರುತವೆಂದು ಹೆಸರಿಸಲಾಗಿದೆ.

ಕಳೆದ ವಾರ ಪಶ್ಚಿಮ ಕರಾವಳಿಯಲ್ಲಿ ಹಲವರ ಸಾವು-ನೋವುಗಳಿಗೆ ಕಾರಣವಾಗಿದ್ದ ತೌತೆ ಚಂಡಮಾರುತವು 'ಅತ್ಯಂತ ತೀವ್ರ ಚಂಡಮಾರುತ' ಎಂದು ಹವಾಮಾನ ಇಲಾಖೆ ವ್ಯಾಖ್ಯಾನಿಸಿದೆ. ಕಳೆದ ವರ್ಷ ದೇಶದ ಪೂರ್ವ ಕರಾವಳಿಗೆ ಅಪ್ಪಳಿಸಿದ್ದ 'ಅಂಫಾನ್‌' ಚಂಡಮಾರುತವನ್ನು 'ಸೂಪರ್‌ ಚಂಡಮಾರುತ' ಎಂದು ಕರೆಯಲಾಗಿತ್ತು.

ಹವಾಮಾನ ಇಲಾಖೆಯು ಗಾಳಿಯ ವೇಗದ ತೀವ್ರತೆಯನ್ನು ಆಧರಿಸಿ ಚಂಡಮಾರುತಗಳನ್ನು ಹಲವು ರೀತಿಯಲ್ಲಿ ವರ್ಗೀಕರಣ ಮಾಡಿದೆ. ಚಂಡಮಾರುತದಿಂದ ಸಂಭವಿಸಬಹುದಾದ ಪ್ರಾಣ ಮತ್ತು ಆಸ್ತಿಪಾಸ್ತಿಗಳ ಹಾನಿಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಈ ವರ್ಗೀಕರಣ ಸಹಾಯ ಮಾಡಲಿದೆ.

ADVERTISEMENT

ಚಂಡಮಾರುತಗಳನ್ನು ಎಂಟು ವಿಧಗಳನ್ನಾಗಿ ವರ್ಗೀಕರಿಸಲಾಗಿದೆ...

* ಕಡಿಮೆ ಒತ್ತಡದ ಪ್ರದೇಶ (Low-pressure area): ಇಲ್ಲಿ ಗಾಳಿಯ ವೇಗವು ಗಂಟೆಗೆ 31 ಕಿ.ಮೀಗಿಂತ ಕಡಿಮೆ ಇರುತ್ತದೆ.

* ವಾಯುಭಾರ ಕುಸಿತ(Depression): ಕಡಿಮೆ ವೇಗದ ಬಿರುಗಾಳಿಗೆ ಈ ರೀತಿ ಕರೆಯುತ್ತಾರೆ. ಇಲ್ಲಿ ಗಾಳಿಯ ವೇಗ ಪ್ರತಿ ಗಂಟೆಗೆ 31ರಿಂದ 49 ಕಿ.ಮೀ ವರೆಗೆ ಇರುತ್ತದೆ.

* ತೀವ್ರ ವಾಯುಭಾರ ಕುಸಿತ(Deep depression): ವಾಯುಭಾರ ಕುಸಿತ ತೀವ್ರಗೊಂಡಾಗಿನ ಸ್ಥಿತಿ. ಈ ಸ್ಥಿತಿಯಲ್ಲಿ ಗಾಳಿಯ ವೇಗ ಪ್ರತಿ ಗಂಟೆಗೆ 50ರಿಂದ 61 ಕಿ.ಮೀ ಕಿ.ಮೀನಷ್ಟಿರುತ್ತದೆ.

* ಚಂಡಮಾರುತ(Cyclonic storm): ತೀವ್ರ ವಾಯುಭಾರ ಕುಸಿತವು ಬಿರುಗಾಳಿಯಾಗಿ ಬದಲಾಗುತ್ತದೆ. ಇಲ್ಲಿ ಗಾಳಿಯ ವೇಗ ಪ್ರತಿ ಗಂಟೆಗೆ 62ರಿಂದ 88 ಕಿ.ಮೀ ವರೆಗೆ ಇರುತ್ತದೆ.

* ತೀವ್ರ ಚಂಡಮಾರುತ(Severe cyclonic storm): ಗಾಳಿಯ ವೇಗ ಪ್ರತಿ ಗಂಟೆಗೆ 89ರಿಂದ117 ಕಿ.ಮೀನಷ್ಟಿರುತ್ತದೆ.

* ಉಗ್ರ ಚಂಡಮಾರುತ(Very Severe cyclonic storm): ಪ್ರತಿ ಗಂಟೆಗೆ ಗಾಳಿಯ ವೇಗ 118ರಿಂದ 167 ಕಿ.ಮೀವರೆಗೆ ಇರುತ್ತದೆ.

* ಅತ್ಯುಗ್ರ ಚಂಡಮಾರುತ(Extremely severe cyclonic storm): ಇಲ್ಲಿ ಗಾಳಿಯು ಪ್ರತಿ ಗಂಟೆಗೆ 168ರಿಂದ 221ಕಿ.ಮೀ ವೇಗದಲ್ಲಿ ಬೀಸುತ್ತದೆ.

* ಸೂಪರ್‌ ಚಂಡಮಾರುತ(Super cyclonic storm): ಚಂಡಮಾರುತಗಳ ವರ್ಗೀಕರಣದಲ್ಲಿ ಇದು ಕೊನೆಯ ವಿಧ. ಪ್ರತಿ ಗಂಟೆಗೆ 222 ಕಿ.ಮೀಗಿಂತ ಹೆಚ್ಚು ವೇಗದ ಚಂಡಮಾರುತ ಈ ವರ್ಗಕ್ಕೆ ಸೇರುತ್ತದೆ.

ಇವುಗಳನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.