ನವದೆಹಲಿ: ಬೌದ್ಧ ಧರ್ಮಗುರು ದಲೈ ಲಾಮಾ ಅವರಿಗೆ ಭಾರತ ರತ್ನ ನೀಡುವಂತೆ ಅರುಣಾಚಲ ಪ್ರದೇಶದ ಬಿಜೆಪಿ ಸಂಸದ ತಾಪಿರ್ ಗಾವ್ ಅವರು ಕೇಂದ್ರ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ದಲೈ ಲಾಮಾ ಅವರು ಜಾಗತಿಕ ಶಾಂತಿ ಮತ್ತು ಸಹಾನುಭೂತಿಯ ಪ್ರತಿರೂಪದಂತಿದ್ದಾರೆ. ಅವರ ಸಾಧನೆಯನ್ನು ಪರಿಗಣಿಸಿ ಅವರಿಗೆ ಭಾರತ ರತ್ನ ನೀಡಬೇಕು ಎಂದಿದ್ದಾರೆ.
ಲೋಕಸಭೆ ಕಲಾಪದ ಶೂನ್ಯವೇಳೆಯಲ್ಲಿ ಮಾತನಾಡಿದ ತಾಪಿರ್ ಗಾವ್ ‘ಭಾರತವು ಅಹಿಂಸೆಯ ನೆಲ. ದಲೈ ಲಾಮಾ ಅವರು ಕೂಡ ಅಹಿಂಸೆಯ ಪ್ರತಿಪಾದಕರು. ಅವರಿಗೆ ಭಾರತ ರತ್ನ ನೀಡುವ ಮೂಲಕ ಭಾರತ ಸರ್ಕಾರವು ಅವರ ಸಾಧನೆಯನ್ನು ಗುರುತಿಸಬೇಕು ಎಂದಿದ್ದಾರೆ.
‘90 ವರ್ಷದ ದಲೈ ಲಾಮಾ ಅವರು ಕೇವಲ ಬೌದ್ಧ ಧರ್ಮಕ್ಕಷ್ಟೇ ಅಲ್ಲದೇ ಮಾನವೀಯತೆಗೆ ದೊಡ್ಡ ಕೊಡುಗೆ ನೀಡಿದ್ದಾರೆ. ಇಂದು ಅವರು ಕೇವಲ ಧರ್ಮ ಗುರುವಾಗಷ್ಟೇ ಉಳಿದಿಲ್ಲ, ಬದಲಾಗಿ ಜಗತ್ತಿನಾದ್ಯಂತ ಶಾಂತಿಯ ಸಂಕೇತವಾಗಿದ್ದಾರೆ. ಅವರ ಸಂದೇಶಗಳು ಒಂದು ತಲೆಮಾರಿನ ಜನರನ್ನು ಸನ್ಮಾರ್ಗದಲ್ಲಿ ನಡೆಯುವಂತೆ ರೂಪಿಸಿದೆ. ಅವರು ಭಾರತ ರತ್ನಕ್ಕೆ ಅರ್ಹರು’ ಎಂದು ಪ್ರತಿಪಾದಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.