ADVERTISEMENT

ಆರ್‌ಟಿಐ ಅಡಿ ಮಾಹಿತಿ ಕೇಳಿದ ದಲಿತ ಕಾರ್ಯಕರ್ತನಿಗೆ ಥಳಿತ, ಮೂತ್ರ ಕುಡಿಯಲು ಒತ್ತಾಯ

ಪಿಟಿಐ
Published 28 ಫೆಬ್ರುವರಿ 2022, 10:09 IST
Last Updated 28 ಫೆಬ್ರುವರಿ 2022, 10:09 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಗ್ವಾಲಿಯರ್: ಗ್ರಾಮ ಪಂಚಾಯಿತಿಗೆ ಸಂಬಂಧಿಸಿದ ಮಾಹಿತಿಯನ್ನು ಕೇಳಿದ 33 ವರ್ಷದ ದಲಿತ ಆರ್‌ಟಿಐ ಕಾರ್ಯಕರ್ತರೊಬ್ಬರನ್ನು ಥಳಿಸಿರುವ ಏಳು ಮಂದಿ, ಮೂತ್ರ ಕುಡಿಯುವಂತೆ ಒತ್ತಾಯಿಸಿರುವ ಘಟನೆ ಮಧ್ಯ ಪ್ರದೇಶದ ಗ್ವಾಲಿಯರ್ ಜಿಲ್ಲೆಯಲ್ಲಿ ನಡೆದಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.

ಸ್ಥಳೀಯ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿದ ಬಳಿಕ ಸಂತ್ರಸ್ತ ಶಶಿಕಾಂತ್ ಜಾಟವ್ ಎಂಬುವವರನ್ನು ಹೆಚ್ಚಿನ ಚಿಕಿತ್ಸೆಗಾಗಿ ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಂತ್ರಸ್ತ ದಾಖಲಿಸಿದ ದೂರಿನ ಅನ್ವಯ ಘಟನೆಗೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.

ADVERTISEMENT

ಮಾಹಿತಿ ಹಕ್ಕು ಕಾಯ್ದೆಯಡಿ ಜಾಟವ್ ಅವರು ಪನಿಹಾರ್ ಪೊಲೀಸ್ ಠಾಣಾ ವ್ಯಾಪ್ತಿಯ ಬರ್ಹಿ ಗ್ರಾಮ ಪಂಚಾಯಿತಿಗೆ ಸಂಬಂಧಿಸಿದಂತೆ ಮಾಹಿತಿಯನ್ನು ಕೇಳಿದ್ದರು ಎಂದು ಪೊಲೀಸ್ ಹೆಚ್ಚುವರಿ ಸೂಪರಿಂಟೆಂಡೆಂಟ್‌ ಜಯರಾಜ್ ಕುಬೇರ್ ತಿಳಿಸಿದ್ದಾರೆ.

ಮಾಹಿತಿ ಕೇಳಿದ ವಿಚಾರವಾಗಿ ಬರ್ಹಿ ಸರಪಂಚರ ಪತಿ, ಪಂಚಾಯಿತಿಯ ಕಾರ್ಯದರ್ಶಿ ಮತ್ತು ಇತರರು ಸಂತ್ರಸ್ತನನ್ನು ಫೆ.23ರಂದು ಗ್ರಾಮ ಪಂಚಾಯಿತಿ ಕಾರ್ಯಾಲಯಕ್ಕೆ ಬರುವಂತೆ ತಿಳಿಸಿದ್ದರು. ಬಂದಾಗ ಕೊಠಡಿಯೊಂದರಲ್ಲಿ ಕೂಡಿ ಹಾಕಿ ಅಮಾನವೀಯವಾಗಿ ಥಳಿಸಿ, ಮೂತ್ರ ಕುಡಿಯುವಂತೆ ಒತ್ತಾಯಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಐಪಿಸಿ ಸೆಕ್ಷನ್ ಅಡಿಯಲ್ಲಿ ಕೊಲೆ ಯತ್ನ ಮತ್ತು ಅಪಹರಣ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ದೌರ್ಜನ್ಯ ತಡೆ ಕಾಯ್ದೆಯಡಿ ಏಳು ಜನರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿಗಳನ್ನು ಆಶಾ ಕೌರವ್, ಸಂಜಯ್ ಕೌರವ್, ಧಾಮು, ಭುರಾ, ಗೌತಮ್, ವಿವೇಕ್ ಶರ್ಮಾ ಮತ್ತು ಸರ್ನಾಮ್ ಸಿಂಗ್ ಎಂದು ಗುರುತಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.