ADVERTISEMENT

ದಲಿತರು ತುಳಿತಕ್ಕೊಳಗಾದರೆ ‘ಬುಲ್ಡೋಜರ್‌’ ಕದಲಲ್ಲ: ಕಾಂಗ್ರೆಸ್‌ ಆರೋಪ

​ಪ್ರಜಾವಾಣಿ ವಾರ್ತೆ
Published 12 ಜನವರಿ 2026, 15:50 IST
Last Updated 12 ಜನವರಿ 2026, 15:50 IST
   

ನವದೆಹಲಿ: ‘ಮೀರಟ್‌ನಲ್ಲಿ ದಲಿತ ಮಹಿಳೆಯೊಬ್ಬರನ್ನು ಹತ್ಯೆ ಮಾಡಿ, ಅವರ ಮಗಳನ್ನು ಅಪಹರಿಸಲಾಗಿದೆ. ದಲಿತರು, ಬುಡಕಟ್ಟು ಜನರು ಮತ್ತು ಹಿಂದುಳಿದ ವರ್ಗದವರು ಅಪರಾಧಿಗಳಾಗಿದ್ದರೆ ಮಾತ್ರವೇ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ‘ಬುಲ್ಡೋಜರ್‌’ ಕೆಲಸ ಮಾಡುತ್ತದೆ’ ಎಂದು ಕಾಂಗ್ರೆಸ್‌ ಆರೋಪಿಸಿದೆ.

ಕಾಂಗ್ರೆಸ್‌ನ ಪರಿಶಿಷ್ಟ ಜಾತಿ ವಿಭಾಗದ ಮುಖ್ಯಸ್ಥ ರಾಜೇಂದ್ರ ಪಾಲ್‌ ಗೌತಮ್‌ ಅವರು ಸೋಮವಾರ ಉತ್ತರ ಪ್ರದೇಶದ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ‘ಜಾತಿ, ಧರ್ಮದ ಆಧಾರದಲ್ಲಿ ಆದಿತ್ಯನಾಥ ಅವರ ‘ಬುಲ್ಡೋಜರ್’ ಕಾರ್ಯನಿರ್ವಹಿಸುತ್ತದೆ. ದಲಿತರು ತುಳಿತಕ್ಕೆ ಒಳಗಾದರೆ, ‘ಬುಲ್ಡೋಜರ್’ ಕದಲುವುದಿಲ್ಲ’ ಎಂದರು.

‘ಮಹಿಳೆ ಮತ್ತು ಆಕೆಯ ಮಗಳು ಕಾಡಿನೊಳಗೆ ಹೋಗುತ್ತಿದ್ದಾಗ, ಮಗಳನ್ನು ಅಪಹರಿಸಲಾಯಿತು. ಇದನ್ನು ತಡೆಯಲು ಹೋದ ಮಹಿಳೆಯನ್ನು ಕ್ರೂರವಾಗಿ ಹತ್ಯೆ ಮಾಡಲಾಗಿದೆ. ನಾವು ಸಂತ್ರಸ್ತೆಯ ಕುಟುಂಬದವರನ್ನು ಭೇಟಿ ಮಾಡಲು ತೆರಳಿದಾಗ ಪೊಲೀಸರು ತಡೆದರು. ಅಪರಾಧ ತಡೆಯುವಲ್ಲಿಯೂ ಪೊಲೀಸರು ಈ ಶ್ರದ್ಧೆ ತೋರಿಸಬೇಕು’ ಎಂದರು.

‘ದಲಿತರ ಮೇಲಿನ ದೌರ್ಜನ್ಯದ ಘಟನೆಗಳು ಬಿಜೆಪಿ ಆಡಳಿತವಿರುವ ರಾಜ್ಯಗಳಾದ ಉತ್ತರ ಪ್ರದೇಶ, ಮಧ್ಯ ಪ್ರದೇಶ, ರಾಜಸ್ಥಾನ, ಮಹಾರಾಷ್ಟ್ರ ಮತ್ತು ಬಿಹಾರದಲ್ಲಿಯೇ ಹೆಚ್ಚು ನಡೆಯುತ್ತಿದೆ. ಈ ಐದು ರಾಜ್ಯಗಳಲ್ಲಿ ಒಟ್ಟು ಶೇ 76ರಷ್ಟು ದೌರ್ಜನ್ಯ ಪ್ರಕರಣಗಳು ವರದಿಯಾಗುತ್ತಿದ್ದರೆ, ಉತ್ತರ ಪ್ರದೇಶವೊಂದರಲ್ಲಿಯೇ ಶೇ 26ರಷ್ಟು ಇಂಥ ಪ್ರಕರಣಗಳು ನಡೆಯುತ್ತಿದೆ’ ಎಂದು ದೂರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.