ADVERTISEMENT

ದಲಿತರು ಇಸ್ಲಾಂ, ಕ್ರೈಸ್ತ ಧರ್ಮಕ್ಕೆ ಮತಾಂತರವಾದರೆ ಮೀಸಲು ಇಲ್ಲ: ಸಚಿವ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2021, 16:57 IST
Last Updated 12 ಫೆಬ್ರುವರಿ 2021, 16:57 IST
ರವಿಶಂಕರ್‌ ಪ್ರಸಾದ್‌
ರವಿಶಂಕರ್‌ ಪ್ರಸಾದ್‌   

ನವದೆಹಲಿ: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವ್ಯಕ್ತಿಗಳು ಇಸ್ಲಾಂ ಅಥವಾ ಕ್ರೈಸ್ತ ಧರ್ಮಕ್ಕೆ ಮತಾಂತರವಾದರೆ, ಪರಿಶಿಷ್ಟ ಜಾತಿ ಅಥವಾ ಪಂಗಡಕ್ಕೆ ಮೀಸಲಾದ ವಿಧಾನ ಸಭೆ ಅಥವಾ ಲೋಕಸಭೆ ಕ್ಷೇತ್ರದಿಂದ ಸ್ಪರ್ಧಿಸಲು ಅವರು ಅರ್ಹರಲ್ಲ ಎಂದು ಕೇಂದ್ರ ಕಾನೂನು ಸಚಿವ ರವಿಶಂಕರ್‌ ಪ್ರಸಾದ್‌ ಅವರು ರಾಜ್ಯಸಭೆಯಲ್ಲಿ ತಿಳಿಸಿದ್ದಾರೆ. ಬಿಜೆಪಿ ಸದಸ್ಯ ಜಿ.ವಿ.ಎಲ್‌ ನರಸಿಂಹ ರಾವ್‌ ಅವರು ಕೇಳಿದ ಪ್ರಶ್ನೆಗೆ ಅವರು ಹೀಗೆ ಉತ್ತರಿಸಿದ್ದಾರೆ.

ಇಸ್ಲಾಂ ಮತ್ತು ಕ್ರೈಸ್ತ ಧರ್ಮಕ್ಕೆ ಮತಾಂತರವಾದ ಪರಿಶಿಷ್ಟ ಜಾತಿ ಅಥವಾ ಪಂಗಡದ ವ್ಯಕ್ತಿಗಳು ಮೀಸಲು ಕ್ಷೇತ್ರಗಳಿಂದ ಸ್ಪರ್ಧಿಸಲು ಅರ್ಹರೇ, ಹೌದಾದರೆ ಇದಕ್ಕೆ ಇರುವ ಕಾನೂನಿನ ನೆಲೆ ಏನು ಎಂದು ರಾವ್‌ ಅವರು ಪ್ರಶ್ನಿಸಿದ್ದರು.

ಪರಿಶಿಷ್ಟ ಜಾತಿಯ ಜನರನ್ನು ತಾರತಮ್ಯದಿಂದ ನೋಡಿರುವುದು ಹಿಂದೂ ಸಮಾಜದ ತಪ್ಪು ಪದ್ಧತಿ. ಹಾಗೆಯೇ, ಪರಿಶಿಷ್ಟ ಜನಾಂಗದ ಜನರು ಕಾಡಿನಲ್ಲಿ ನೆಲೆಸಿರುವವರು. ಇವರನ್ನು ಮುಖ್ಯವಾಹಿನಿಗೆ ತರಬೇಕು ಎಂಬ ಕಾರಣಕ್ಕಾಗಿಯೇ ರಾಜಕೀಯ ಮೀಸಲಾತಿ ನೀಡಲಾಗಿದೆ. ಈ ಮೀಸಲಾತಿಯು ಹಿಂದೂ ಧರ್ಮದಲ್ಲಿ ಇರುವವರಿಗೆ ಮಾತ್ರ ಎಂಬುದನ್ನು 1950ರ ಪರಿಶಿಷ್ಟ ಜಾತಿಗಳ ಆದೇಶದಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ನಂತರದ ದಿನಗಳಲ್ಲಿ ಸಿಖ್‌ ಮತ್ತು ಬೌದ್ಧ ಧರ್ಮವನ್ನು ಇದಕ್ಕೆ ಸೇರಿಸಲಾಗಿದೆ ಎಂದು ರವಿಶಂಕರ್‌ ಪ್ರಸಾದ್‌ ವಿವರಿಸಿದ್ದಾರೆ. ಹಿಂದೂ ಪೂಜಾ ವಿಧಾನಗಳನ್ನೇ ಈ ಎರಡು ಸಮುದಾಯಗಳು ಅನುಸರಿಸುತ್ತಾರೆ ಎಂಬುದನ್ನು ಸಂವಿಧಾನದಲ್ಲಿ ಉಲ್ಲೇಖಿಸಿರುವ ಕಾರಣಕ್ಕೆ ಈ ಜಾತಿಗಳನ್ನೂ ಸೇರಿಸಿಕೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.

ADVERTISEMENT

ಇಸ್ಲಾಂ ಮತ್ತು ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡ ಪರಿಶಿಷ್ಟ ಜಾತಿ, ಪಂಗಡದವರು ಮೀಸಲು ಕ್ಷೇತ್ರದಿಂದ ಆಯ್ಕೆಯಾದರೆ ಅವರನ್ನು ಅನರ್ಹಗೊಳಿಸುವುದಕ್ಕಾಗಿ ಜನಪ್ರಾತಿನಿಧ್ಯ ಕಾಯ್ದೆಗೆ ತಿದ್ದುಪಡಿ ಮಾಡಬೇಕು ಎಂದೂ ರಾವ್‌ ಅವರು ಕೋರಿದ್ದರು. ಇಂತಹ ಆಯ್ಕೆಯನ್ನು ಪ್ರಶ್ನಿಸಲು ಚುನಾವಣಾ ಕಾನೂನಿನಲ್ಲಿ ಬಹಳಷ್ಟು ಅವಕಾಶಗಳಿವೆ. ಹಾಗಿದ್ದರೂ ಈ ವಿಚಾರ
ವನ್ನು ಸರ್ಕಾರ ಮತ್ತು ಚುನಾವಣಾ ಆಯೋಗದ ಗಮನಕ್ಕೆ ತರುವುದಾಗಿ ರವಿಶಂಕರ್‌ ಪ್ರಸಾದ್‌ ಭರವಸೆ ಕೊಟ್ಟಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.