ADVERTISEMENT

ದಲಿತ ನಾಯಕರು ಬಿಕ್ಕಟ್ಟು, ದಾಳಿಗಳನ್ನು ಎದುರಿಸಬೇಕು: ಕೋಡಿಕುನ್ನಿಲ್‌ ಸುರೇಶ್‌

ಕೇರಳ ಕಾಂಗ್ರೆಸ್‌ನ ಹಿರಿಯ ಸಂಸದ ಕೋಡಿಕುನ್ನಿಲ್‌ ಸುರೇಶ್‌ ವಿಷಾದ

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2025, 14:45 IST
Last Updated 23 ಮಾರ್ಚ್ 2025, 14:45 IST
ಕೋಡಿಕುನ್ನಿಲ್‌ ಸುರೇಶ್–ಪಿಟಿಐ ಚಿತ್ರ
ಕೋಡಿಕುನ್ನಿಲ್‌ ಸುರೇಶ್–ಪಿಟಿಐ ಚಿತ್ರ   

ತಿರುವನಂತಪುರಂ: ‘ದಲಿತ ಸಮುದಾಯದ ಬಹಳಷ್ಟು ನಾಯಕರು ನಿರಂತರ ದಾಳಿ ಹಾಗೂ ಬಿಕ್ಕಟ್ಟು ಎದುರಿಸುತ್ತಿರುವ ಕಾರಣ, ರಾಜಕೀಯದಲ್ಲಿ ಉಳಿಯಲು ಸಾಧ್ಯವಾಗುತ್ತಿಲ್ಲ’ ಎಂದು ಕಾಂಗ್ರೆಸ್‌ನ ಹಿರಿಯ ನಾಯಕ ಕೋಡಿಕುನ್ನಿಲ್‌ ಸುರೇಶ್‌ ವಿಷಾದ ವ್ಯಕ್ತಪಡಿಸಿದ್ದಾರೆ. 

ಭಾನುವಾರ ತಮ್ಮ ಕ್ಷೇತ್ರ ಮಾವೇಲಿಕರದಲ್ಲಿ ‘ಗಾಂಧಿ ಗ್ರಾಮ’ದಿಂದ ಆಯೋಜಿಸಿದ್ದ ‘ದಲಿತರ ಪ್ರಗತಿ ಸಮಾವೇಶ’ದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

‘ಲೋಕಸಭೆಗೆ ನಾನು 8 ಬಾರಿ ಆಯ್ಕೆಯಾಗಿದ್ದೇನೆ. ಅತ್ಯಂತ ಕಠಿಣ ಪರಿಸ್ಥಿತಿ ಹಾಗೂ ದಾಳಿಗಳನ್ನು ಎದುರಿಸಿ, ರಾಜಕೀಯದಲ್ಲಿ ನಾನು ಉಳಿಯಲು ಸಾಧ್ಯವಾಯಿತು. ಕಳೆದ ಚುನಾವಣೆಯಲ್ಲಿಯೂ ಕೆಲವು ಮಾಧ್ಯಮಗಳು, ಕೇರಳದಲ್ಲಿ ಬೇರೆ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳು ಗೆದ್ದರೂ, ನಾನು ಸೋಲುತ್ತೇನೆ ಎಂದೇ ಬಿಂಬಿಸಿದವು. ಅಂತಹ ದಾಳಿಗಳನ್ನು ಎದುರಿಸಿ, ನಾನು ಗೆದ್ದಿದ್ದೇನೆ. ದಲಿತ ಸಮುದಾಯದ ಹಲವು ನಾಯಕರು ಇಂತಹ ದಾಳಿಗಳನ್ನು ಎದುರಿಸಲು ಸಾಧ್ಯವಾಗದೆ, ರಾಜಕೀಯದಲ್ಲಿ ಉಳಿಯಲು ಸಾಧ್ಯವಾಗುತ್ತಿಲ್ಲ’ ಎಂದು ತಿಳಿಸಿದರು.

ADVERTISEMENT

ಪಕ್ಷದಲ್ಲಿ ಸರಿಯಾದ ಸ್ಥಾನಮಾನ ಸಿಗುತ್ತಿಲ್ಲ ಎಂಬ ಕಾರಣಕ್ಕಾಗಿಯೇ ಸುರೇಶ್‌ ಅವರು ಈ ಹೇಳಿಕೆ ನೀಡಿದ್ದಾರೆ ಎಂದು ಹೇಳಲಾಗಿದೆ.

ಈ ಬೆಳವಣಿಗೆ ಕುರಿತು ಪ್ರತಿಕ್ರಿಯಿಸಿರುವ ಕೇರಳ ವಿರೋಧ ಪಕ್ಷದ ನಾಯಕ ವಿ.ಡಿ. ಸತೀಶನ್‌, ‘ಸುರೇಶ್‌ ಅವರು ತಮ್ಮ ವೈಯಕ್ತಿಕ ಬದುಕಿನ ಕುರಿತು ಉಲ್ಲೇಖಿಸಿದ್ದಾರೆ. ಕಾಂಗ್ರೆಸ್‌ ರಾಜ್ಯ ಘಟಕವು ಮೊದಲಿನಿಂದಲೂ ಅವರ ಬೆನ್ನಿಗೆ ನಿಂತಿದೆ. ಕಳೆದ ಚುನಾವಣೆಯಲ್ಲಿಯೂ ಅವರನ್ನು ಸೋಲಿಸಲು ಕೆಲವರು ಪ್ರಯತ್ನಿಸಿದರೂ, ಪಕ್ಷವು ಅವರಿಗೆ ಚುನಾವಣೆಗೆ ಸ್ಪರ್ಧಿಸುವಂತೆ ಸೂಚಿಸಿತ್ತು’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.