ರಾಯ್‌ಬರೇಲಿ: ಕಳ್ಳನೆಂದು ಭಾವಿಸಿ ದಲಿತ ವ್ಯಕ್ತಿಯನ್ನು ಗ್ರಾಮಸ್ಥರು ಹೊಡೆದು ಕೊಂದ ಘಟನೆ ಉತ್ತರ ಪ್ರದೇಶದ ರಾಯ್‌ಬರೇಲಿಯಲ್ಲಿ ನಡೆದಿದೆ ಎಂದು ಪೊಲೀಸರು ಸೋಮವಾರ ತಿಳಿಸಿದರು.
ಮೃತ ವ್ಯಕ್ತಿಯನ್ನು ಫತೇಹ್‌ಪುರದ ನಿವಾಸಿ ಹರಿ ಓಂ ಎಂದು ಗುರುತಿಸಲಾಗಿದೆ.
ಮನೆಗಳ ಕಳ್ಳತನಕ್ಕಾಗಿ ಗುಂಪೊಂದು ಡ್ರೋನ್ ಬಳಕೆ ಮಾಡುತ್ತಿದೆ ಎಂಬ ವದಂತಿ ಹಬ್ಬಿದ್ದ ಕಾರಣ 40 ವರ್ಷದ ದಲಿತ ವ್ಯಕ್ತಿಯನ್ನು ತಪ್ಪಾಗಿ ತಿಳಿದು ಬಡಿದು ಕೊಲ್ಲಲಾಗಿದೆ ಎಂದು ಹೇಳಿದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಐವರನ್ನು ಬಂಧಿಸಲಾಗಿದೆ, ಮೂವರು ಪೊಲೀಸ್ ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ. ಆರೋಪಿಗಳಲ್ಲಿ ದಲಿತರು, ಹಿಂದುಳಿದ ವರ್ಗದರೂ ಸೇರಿದ್ದಾರೆ ಎಂದು ತಿಳಿಸಿದರು.
ಕಳ್ಳರ ಗುಂಪಿನ ಬಗ್ಗೆ ವದಂತಿ ಹಬ್ಬಿದ್ದರಿಂದ ಕೆಲ ಗ್ರಾಮಸ್ಥರು ರಾತ್ರಿ ಹೊತ್ತು ಕಾವಲು ಕಾಯುತ್ತಿದ್ದರು. ಸಂತ್ರಸ್ತ ಹರಿ ಓಂ ಅವರು ಬುಧವಾರ ರಾತ್ರಿ ಗ್ರಾಮದಲ್ಲಿ ಹೋಗುತ್ತಿದ್ದ ವೇಳೆ ಗ್ರಾಮಸ್ಥರು ತಡೆದು ಬಡಿಗೆಗಳಿಂದ ಮನಬಂದಂತೆ ಥಳಿಸಿದ್ದಾರೆ ಎಂದು ಮಾಹಿತಿ ನೀಡಿದರು.
ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಗುಂಪು ‘ಬಾಬಾವಾಲೆ’ ಎಂದು ಹೇಳುವಂತೆ ಒತ್ತಾಯಿಸಿದರೂ ಸಂತ್ರಸ್ತ ಯುವಕ ರಾಹುಲ್ ಗಾಂಧಿ ಅವರ ಹೆಸರನ್ನು ಪದೇ ಪದೇ ಹೇಳುತ್ತಿರುವ ದೃಶ್ಯ ವಿಡಿಯೊದಲ್ಲಿದೆ.
ಹರಿ ಓಂ ಅವರ ಮೃತದೇಹವು ಗುರುವಾರ ಬೆಳಿಗ್ಗೆ ಸಮೀಪದ ರೈಲು ಹಳಿ ಪಕ್ಕ ಪತ್ತೆಯಾಗಿದೆ. ಅವರ ಬಟ್ಟೆ ಹರಿದಿತ್ತು, ಮೈಮೇಲೆ ಗಾಯದ ಗುರುತುಗಳಿದ್ದವು ಎಂದರು.
ಘಟನೆ ಸಂಬಂಧಿಸಿದಂತೆ ಕೊಲೆ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಂಜೀವ್ ಕುಮಾರ್ ಸಿನ್ಹಾ ಅವರು ತಿಳಿಸಿದರು.
ಯೋಗಿ ರಾಜೀನಾಮೆಗೆ ಕಾಂಗ್ರೆಸ್ ಆಗ್ರಹ
ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಕ್ಷೇತ್ರವಾದ ರಾಯ್‌ಬರೇಲಿಯಲ್ಲಿ ದಲಿತ ಯುವಕನನ್ನು ಬಡಿದುಕೊಂದ ಪ್ರಕರಣವು ರಾಜಕೀಯ ವಿವಾದದ ಸ್ವರೂಪ ಪಡೆದುಕೊಂಡಿದೆ. ‘ಉತ್ತರ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದುಬಿದ್ದಿದೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಕೂಡಲೇ ರಾಜೀನಾಮೆ ನೀಡಬೇಕು. ಪ್ರಕರಣದ ತನಿಖೆಯ ಹೊಣೆಯನ್ನು ವಿಶೇಷ ತನಿಖಾ ದಳಕ್ಕೆ (ಎಸ್‌ಐಟಿ) ವಹಿಸಬೇಕು’ ಎಂದು ಆಗ್ರಹಿಸಿದೆ. ಸಂತ್ರಸ್ತನ ಕುಟುಂಬಸ್ಥರಿಗೆ ₹1 ಕೋಟಿ ಪರಿಹಾರ ಮತ್ತು ಸರ್ಕಾರಿ ಉದ್ಯೋಗ ನೀಡಬೇಕು ಎಂದು ಒತ್ತಾಯಿಸಿದೆ. ಈ ಮಧ್ಯೆ ಹತ್ಯೆಯು ಬಿಜೆಪಿಯ ‘ದಲಿತ ವಿರೋಧಿ ಮನಸ್ಥಿತಿ’ಯ ಸಂಕೇತ ಎಂದು ಬಿಂಬಿಸಲು ಕಾಂಗ್ರೆಸ್ ಯೋಜನೆ ರೂಪಿಸುತ್ತಿದೆ. ರಾಜ್ಯ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಉದ್ದೇಶದಿಂದ ರಾಜ್ಯದಾದ್ಯಂತ ಪ್ರತಿಭಟನೆ ಆರಂಭಿಸಿದೆ. ರಾಹುಲ್ ಗಾಂಧಿ ಮತ್ತು ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಅಜಯ್ ರಾಯ್ ಅವರು ಸಂತ್ರಸ್ತನ ಕುಟುಂಬಸ್ಥರೊಂದಿಗೆ ಮಾತನಾಡಿ ಎಲ್ಲ ರೀತಿಯ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.