ADVERTISEMENT

ತುರ್ತುಪರಿಸ್ಥಿತಿಯ ಕರಾಳ ದಿನಗಳನ್ನು ಮರೆಯಲಾಗದು: ಪ್ರಧಾನಿ ಮೋದಿ

ಪಿಟಿಐ
Published 25 ಜೂನ್ 2021, 7:20 IST
Last Updated 25 ಜೂನ್ 2021, 7:20 IST
ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ   

ನವದೆಹಲಿ: ದೇಶದಲ್ಲಿ ತುರ್ತುಪರಿಸ್ಥಿತಿ ಸಂದರ್ಭದ ‘ಕರಾಳ ದಿನಗಳನ್ನು’ ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಹೇಳಿದ್ದಾರೆ.

ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿ 46 ವರ್ಷಗಳಾದ ಸಂದರ್ಭದಲ್ಲಿ ಟ್ವೀಟ್‌ ಮಾಡಿರುವ ಅವರು, ಭಾರತದ ಪ್ರಜಾಪ್ರಭುತ್ವ ಮನೋಭಾವ ಹಾಗೂ ಸಂವಿಧಾನದ ಮೌಲ್ಯಗಳನ್ನು ಬಲಪಡಿಸಲು ಪ್ರತಿಜ್ಞೆ ಮಾಡುವಂತೆ ಅವರು ಜನರಿಗೆ ಕರೆ ನೀಡಿದ್ದಾರೆ.

‘ನಮ್ಮ ಪ್ರಜಾಪ್ರಭುತ್ವದ ನೀತಿಗಳನ್ನು ಕಾಂಗ್ರೆಸ್‌ ಹೇಗೆ ಬಳಸಿಕೊಂಡಿದೆ ಎಂಬುದಕ್ಕೆ ಇದು ನಿದರ್ಶನವಾಗಿದೆ. ತುರ್ತು ಪರಿಸ್ಥಿತಿಯನ್ನು ವಿರೋಧಿಸಿ ಭಾರತೀಯ ಪ್ರಜಾಪ್ರಭುತ್ವವನ್ನು ರಕ್ಷಿಸಿದ ಎಲ್ಲ ಶ್ರೇಷ್ಠರನ್ನು ನಾವು ನೆನಪಿಸಿಕೊಳ್ಳುತ್ತೇವೆ’ ಎಂದು ಅವರು ಹೇಳಿದ್ದಾರೆ.

ADVERTISEMENT

ಅಲ್ಲದೆ, ಆಗಿನ ಕಾಂಗ್ರೆಸ್ ಸರ್ಕಾರ ಕೈಗೊಂಡಿದ್ದ ಹಲವಾರು ಕಠಿಣ ಕ್ರಮಗಳ ಬಗ್ಗೆಗಿನ ಲಿಂಕ್ ಅನ್ನು ಅವರು ಹಂಚಿಕೊಂಡಿದ್ದಾರೆ.

‘ತುರ್ತು ಪರಿಸ್ಥಿತಿಯ ಕರಾಳ ದಿನಗಳನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. 1975ರಿಂದ 1977ರವರೆಗಿನ ಅವಧಿಯು ಸಂಸ್ಥೆಗಳ ವ್ಯವಸ್ಥಿತ ವಿನಾಶಕ್ಕೆ ಸಾಕ್ಷಿಯಾಯಿತು. ಭಾರತದ ಪ್ರಜಾಪ್ರಭುತ್ವ ಮನೋಭಾವವನ್ನು ಬಲಪಡಿಸಲು ಮತ್ತು ನಮ್ಮ ಸಂವಿಧಾನದಲ್ಲಿ ಪ್ರತಿಪಾದಿಸಿರುವ ಮೌಲ್ಯಗಳಿಗೆ ತಕ್ಕಂತೆ ಬದುಕಲು ಸಾಧ್ಯವಿರುವ ಎಲ್ಲವನ್ನೂ ಮಾಡುವುದಾಗಿ ಪ್ರತಿಜ್ಞೆ ಮಾಡೋಣ’ ಅವರು ಕರೆ ನೀಡಿದ್ದಾರೆ.

ಗೃಹ ಸಚಿವ ಅಮಿತ್‌ ಶಾ ಮತ್ತು ಬಿಜೆಪಿ ಅಧ್ಯಕ್ಷ ಜೆ.ಪಿ ನಡ್ಡಾ ಅವರೂ ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ಮಾಡಿದ್ದಾರೆ.

‘1975ರ ಈ ದಿನದಂದು ಕಾಂಗ್ರೆಸ್ ಪ್ರಜಾಪ್ರಭುತ್ವವನ್ನು ಕೊಲೆ ಮಾಡಿತ್ತು’ ಎಂದು ಗೃಹ ಸಚಿವ ಅಮಿತ್ ಶಾ ಟೀಕಿಸಿದ್ದಾರೆ.

‘ದೇಶದಲ್ಲಿ ಒಂದು ಕುಟುಂಬದ ವಿರುದ್ಧದ ಎದ್ದಿದ್ದ ಧ್ವನಿಯನ್ನು ಅಡಗಿಸಲು ತುರ್ತು ಪರಿಸ್ಥಿತಿ ಹೇರಲಾಯಿತು. ಇದು ಭಾರತದ ಪ್ರಜಾಪ್ರಭುತ್ವದಲ್ಲಿ ಕರಾಳ ಅಧ್ಯಾಯವಾಗಿದೆ’ ಎಂದು ಅವರು ಹೇಳಿದ್ದಾರೆ.

ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ದೌರ್ಜನ್ಯಗಳನ್ನು ಎದುರಿಸಿ, ಹೋರಾಡಿದವರಿಗೆ ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಗೌರವ ಸಲ್ಲಿಸಿದ್ದಾರೆ.

1975 ರಿಂದ 1977ರವರೆಗಿನ 21 ತಿಂಗಳ ಅವಧಿಗೆ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರು ತುರ್ತು ಪರಿಸ್ಥಿತಿ ವಿಧಿಸಿದ್ದರು. ಈ ವೇಳೆ ಜನರ ಮೂಲಭೂತ ಹಕ್ಕುಗಳ ಮೇಲೆ ನಿರ್ಬಂಧ ಹೇರಲಾಗಿತ್ತು. 1977ರಲ್ಲಿ ತುರ್ತು ಪರಿಸ್ಥಿತಿಯನ್ನು ತೆಗೆದು ಹಾಕಿದ ಇಂದಿರಾ ಗಾಂಧಿ ಅವರು ಲೋಕಸಭಾ ಚುನಾವಣೆಗೆ ಕರೆ ನೀಡಿದರು. ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಹೀನಾಯ ಸೋಲಾಯಿತು. ಸ್ವಾತಂತ್ರ್ಯನಂತರ ದೇಶದಲ್ಲಿ ಮೊದಲ ಬಾರಿಗೆ ಜನತಾ ಪಕ್ಷ ಅಧಿಕಾರಕ್ಕೆ ಬಂದಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.