
ಉತ್ತರ ಪ್ರದೇಶದ ಸಹಾರನಪುರ ಜಿಲ್ಲೆಯ ದೇವಬಂದ್‌ನಲ್ಲಿರುವ ದಾರುಲ್ ಉಲೂಮ್‌ಗೆ ಶನಿವಾರ ಭೇಟಿ ನೀಡಿದ ಅಫ್ಗಾನಿಸ್ತಾನ ವಿದೇಶಾಂಗ ಸಚಿವ ಅಮೀರ್ ಖಾನ್ ಮುತ್ತಾಕಿ ಅವರಿಗೆ ಅದ್ದೂರಿ ಸ್ವಾಗತ ಕೋರಲಾಯಿತು
ಪಿಟಿಐ ಚಿತ್ರ
ಲಖನೌ: ಉತ್ತರ ಪ್ರದೇಶದ ಸಹಾರನಪುರ ಜಿಲ್ಲೆಯ ದೇವಬಂದ್‌ನಲ್ಲಿರುವ ಇಸ್ಲಾಂ ಶಿಕ್ಷಣದ ಪ್ರತಿಷ್ಠಿತ ಸಂಸ್ಥೆ ದಾರುಲ್ ಉಲೂಮ್‌ಗೆ ಭೇಟಿ ನೀಡಿದ ಅಫ್ಗಾನಿಸ್ತಾನ ವಿದೇಶಾಂಗ ಸಚಿವ ಅಮೀರ್ ಖಾನ್ ಮುತ್ತಾಕಿ ಅವರ ಕಾರ್ಯಕ್ರಮದ ವರದಿಗೆ ತೆರಳಿದ್ದ ಪತ್ರಕರ್ತೆಯರಿಗೆ ಶನಿವಾರ ಪ್ರವೇಶ ನಿರಾಕರಿಸಲಾಯಿತು ಎಂಬ ಆರೋಪಗಳು ಕೇಳಿಬಂದಿವೆ.
ಅಫ್ಗಾನಿಸ್ತಾನ ರಾಯಭಾರ ಕಚೇರಿಯಲ್ಲಿ ಶುಕ್ರವಾರ ಮುತ್ತಾಕಿ ಅವರು ನಡೆಸಿದ್ದ ಸುದ್ದಿಗೋಷ್ಠಿಗೂ ಪತ್ರಕರ್ತೆಯರಿಗೆ ಪ್ರವೇಶ ನಿರಾಕರಿಸಲಾಗಿತ್ತು. ಇದು ವಿವಾದವಾಗಿದ್ದು, ಕೇಂದ್ರ ಸರ್ಕಾರ ಹಾಗೂ ವಿರೋಧ ಪಕ್ಷಗಳ ನಡುವಿನ ಜಟಾಪಟಿಗೆ ಕಾರಣವಾಗಿದೆ. ಈ ಕಾರಣಕ್ಕೆ ದಾರುಲ್ ಉಲೂಮ್ ಕಾರ್ಯಕ್ರಮ ಕುರಿತು ಕೇಳಿಬಂದಿರುವ ಆರೋಪಗಳಿಗೆ ಮಹತ್ವ ಬಂದಿದೆ. ಆದರೆ, ಈ ಆರೋಪಗಳನ್ನು ದೇವಬಂದ್ ತಳ್ಳಿಹಾಕಿದೆ.
ಉತ್ತರ ಪ್ರದೇಶದ ಸಹಾರನಪುರ ಜಿಲ್ಲೆಯ ದೇವಬಂದ್‌ನಲ್ಲಿರುವ ದಾರುಲ್ ಉಲೂಮ್‌ಗೆ ಶನಿವಾರ ಭೇಟಿ ನೀಡಿದ ಅಫ್ಗಾನಿಸ್ತಾನ ವಿದೇಶಾಂಗ ಸಚಿವ ಅಮೀರ್ ಖಾನ್ ಮುತ್ತಾಕಿ ವಿದ್ಯಾರ್ಥಿಗಳತ್ತ ಕೈಬೀಸಿದರು
‘ಮುತ್ತಾಕಿ ಅವರ ಕಾರ್ಯಕ್ರಮಕ್ಕೆ ಪತ್ರಕರ್ತೆಯರ ಪ್ರವೇಶ ನಿರ್ಬಂಧಿಸುವಂತೆ ಯಾವುದೇ ನಿರ್ದೇಶನಗಳು ಇರಲಿಲ್ಲ’ ಎಂದು ದೇವಬಂದ್‌ನ ಸಾರ್ವಜನಿಕ ಸಂಪರ್ಕಾಧಿಕಾರಿ ಅಶ್ರಫ್ ಉಸ್ಮಾನಿ ಹೇಳಿದ್ದಾರೆ.
‘ಭಾರಿ ಸಂಖ್ಯೆಯಲ್ಲಿ ಜನರು ಸೇರಿದ್ದರು ಹಾಗೂ ಭದ್ರತೆ ಕಾರಣಗಳಿಂದಾಗಿ ಮುತ್ತಾಕಿ ಅವರ ಉಪನ್ಯಾಸ ಕಾರ್ಯಕ್ರಮವನ್ನು ಕೊನೆ ಗಳಿಗೆಯಲ್ಲಿ ರದ್ದುಪಡಿಸಲಾಯಿತು. ಆದರೆ, ಕಾರ್ಯಕ್ರಮದ ವರದಿ ಮಾಡಲು ಕೆಲವೇ ಪತ್ರಕರ್ತೆಯರು ಹಾಜರಿದ್ದರು. ಇದು, ಪತ್ರಕರ್ತೆಯರ ಪ್ರವೇಶ ನಿರ್ಬಂಧ ವಿಧಿಸಿರಲಿಲ್ಲ ಎಂಬುದಕ್ಕೆ ಇದೇ ಸಾಕ್ಷಿ’ ಎಂದೂ ಉಸ್ಮಾನಿ ಹೇಳಿದ್ದಾರೆ.
‘ಕಾರ್ಯಕ್ರಮದ ವರದಿಗಾಗಿ ಬಂದಿದ್ದ ಪತ್ರಕರ್ತೆಯರಿಗೆ ಉಳಿದ ಪತ್ರಕರ್ತರ ಸಾಲಿನಲ್ಲಿಯೇ ಆಸನಗಳ ವ್ಯವಸ್ಥೆ ಮಾಡಲಾಗಿತ್ತು’ ಎಂದ ಅವರು, ‘ಪತ್ರಕರ್ತೆಯರನ್ನು ಪ್ರತ್ಯೇಕವಾಗಿ ಕೂರಿಸಲು ಪರದೆ ಹಾಕಿರಲಿಲ್ಲ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
‘ಸಚಿವ ಮುತ್ತಾಕಿ ಅವರ ಕಾರ್ಯಕ್ರಮಕ್ಕೆ ಯಾರು ಹಾಜರಾಗಬೇಕು ಹಾಗೂ ಯಾರ ಪ್ರವೇಶಕ್ಕೆ ನಿರ್ಬಂಧ ವಿಧಿಸಬೇಕು ಎಂಬ ಕುರಿತು ಮುತ್ತಾಕಿ ಅವರ ಕಚೇರಿಯಿಂದಲೂ ಯಾವುದೇ ನಿರ್ಬಂಧಗಳು ಇರಲಿಲ್ಲ’ ಎಂದು ಹೇಳಿದ್ದಾರೆ.
ಇದಕ್ಕೂ ಮುನ್ನ, ದಾರುಲ್ ಉಲೂಮ್‌ಗೆ ಭೇಟಿ ನೀಡಿದ ಅಮೀರ್ ಖಾನ್ ಮುತ್ತಾಕಿ ಅವರಿಗೆ ಭವ್ಯ ಸ್ವಾಗತ ಕೋರಲಾಯಿತು.
ಅಮೀರ್ ಖಾನ್ ಮುತ್ತಾಕಿ ಅವರ ಪತ್ರಿಕಾಗೋಷ್ಠಿಗೆ ಪತ್ರಕರ್ತೆಯರ ಪ್ರವೇಶ ವನ್ನು ಅಫ್ಗನ್ ವಿದೇಶಾಂಗ ಸಚಿವಾಲಯ ನಿರ್ಬಂಧಿಸಿರ ಲಿಲ್ಲ. ಇದು ಅಪಪ್ರಚಾರ ಅಷ್ಟೆ’ ಎಂದು ಜಮಿಯಾತ್ ಉಲೇಮಾ–ಎ–ಹಿಂದ್ ಅಧ್ಯಕ್ಷ ಮೌಲಾನಾ ಅರ್ಷದ್ ಮದನಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.