ADVERTISEMENT

ಚಪ್ಪಲಿ ಹೊಲಿಗೆ ಕಲಿಸಿದ್ದ ರಾಮ್‌ಚೇತ್‌ ಕುಟುಂಬವನ್ನು ಮನೆಗೆ ಆಹ್ವಾನಿಸಿದ ರಾಹುಲ್

ಪಿಟಿಐ
Published 19 ಫೆಬ್ರುವರಿ 2025, 9:51 IST
Last Updated 19 ಫೆಬ್ರುವರಿ 2025, 9:51 IST
<div class="paragraphs"><p>ಉತ್ತರ ಪ್ರದೇಶದ ಲಖನೌ ಬಳಿ ಚರ್ಮ ಕುಟೀರ ಹೊಂದಿರುವ ರಾಮ್‌ಚೇತ್‌ ಅವರೊಂದಿಗೆ ರಾಹುಲ್ ಗಾಂಧಿ ಸಮಾಲೋಚನೆ ನಡೆಸಿದ್ದ ದೃಶ್ಯ</p></div>

ಉತ್ತರ ಪ್ರದೇಶದ ಲಖನೌ ಬಳಿ ಚರ್ಮ ಕುಟೀರ ಹೊಂದಿರುವ ರಾಮ್‌ಚೇತ್‌ ಅವರೊಂದಿಗೆ ರಾಹುಲ್ ಗಾಂಧಿ ಸಮಾಲೋಚನೆ ನಡೆಸಿದ್ದ ದೃಶ್ಯ

   

ನವದೆಹಲಿ: ವರ್ಷದ ಹಿಂದೆ ಉತ್ತರ ಪ್ರದೇಶದ ಸುಲ್ತಾನ್‌ಪುರಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ರಾಮ್‌ಚೇತ್ ಎಂಬುವವರ ಚರ್ಮ ಕುಟೀರಕ್ಕೆ ಭೇಟಿ ನೀಡಿದ್ದ ರಾಹುಲ್ ಗಾಂಧಿ, ಅವರ ಇಡೀ ಕುಟುಂಬವನ್ನು ತಮ್ಮ ಮನೆಗೆ ಕರೆಯಿಸಿಕೊಂಡು ಸತ್ಕರಿಸಿದ್ದಾರೆ.

ಉತ್ತರ ಪ್ರದೇಶದ ಸುಲ್ತಾನ್‌ಪುರಕ್ಕೆ 2024ರ ಜುಲೈನಲ್ಲಿ ಭೇಟಿ ನೀಡಿದ್ದ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಚರ್ಮ ಕುಟೀರ ಹೊಂದಿದ್ದ ರಾಮ್‌ಚೇತ್ ಅವರನ್ನು ಭೇಟಿ ಮಾಡಿ, ಚಪ್ಪಲಿ ಹೊಲಿಯುವುದರ ಕುರಿತು ಮಾಹಿತಿ ಪಡೆದಿದ್ದರು. ಜತೆಗೆ ವ್ಯಾಪಾರ ವಿಸ್ತರಿಸಲು ಕೆಲ ಸಲಹೆಗಳನ್ನು ರಾಹುಲ್ ನೀಡಿದ್ದರು.

ADVERTISEMENT

ರಾಹುಲ್ ಗಾಂಧಿ ಹಾಗೂ ಅವರ ತಾಯಿ ಮತ್ತು ಸೋದರಿಯನ್ನು ಭೇಟಿ ಮಾಡುವ ಇಂಗಿತವನ್ನು ರಾಮ್‌ಚೇತ್ ವ್ಯಕ್ತಪಡಿಸಿದ್ದರು. ಹೀಗಾಗಿ ಇಡೀ ಕುಟುಂಬಕ್ಕೆ ಬಂದು ಹೋಗುವ ಟಿಕೆಟ್ ಕಾಯ್ದಿರಿಸಿದ ರಾಹುಲ್ ಗಾಂಧಿ, ಅವರನ್ನು ತಮ್ಮ ಮನೆಯಲ್ಲಿ ಬರ ಮಾಡಿಕೊಂಡರು. ಈ ಸಂದರ್ಭದಲ್ಲಿ ಸೋನಿಯಾ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಇದ್ದರು.

60 ವರ್ಷದ ರಾಮ್‌ಚೇತ್ ಅವರು ತಮ್ಮ ಮಗ, ಮಗಳು, ಅಳಿಯ ಹಾಗೂ ಮೊಮ್ಮಕ್ಕಳೊಂದಿಗೆ ರಾಹುಲ್ ಗಾಂಧಿ ಮನೆಗೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿರುವ ರಾಮ್‌ಚೇತ್, ‘ಸದಾ ಬೆಳವಣಿಗೆಯತ್ತ ಚಿಂತಿಸಬೇಕು ಎಂದು ರಾಹುಲ್ ಅವರು ಮಗನಿಗೆ ಮಾರ್ಗದರ್ಶನ ಮಾಡಿದ್ದರು. ಜತೆಗೆ ದೆಹಲಿಗೆ ಕರೆಯಿಸಿಕೊಂಡು ಹೆಚ್ಚಿನ ಗುಣಮಟ್ಟ ಮತ್ತು ಆಕರ್ಷಕ ವಿನ್ಯಾಸದ ಶೂ ಹಾಗೂ ಚಪ್ಪಲಿಗಳನ್ನು ಮಾಡುವುದನ್ನು ಕಲಿಯಲು ಮತ್ತು ಹೆಚ್ಚಿನ ತರಬೇತಿಗೆ ವಿದೇಶಕ್ಕೆ ಕಳುಹಿಸುವ ಭರವಸೆಯನ್ನೂ ನೀಡಿದ್ದರು’ ಎಂದಿದ್ದಾರೆ.

‘2024ರ ಜುಲೈ 26ರಂದು ಲಖನೌಗೆ ತೆರಳುತ್ತಿದ್ದ ರಾಹುಲ್ ಗಾಂಧಿ, ನನ್ನ ಅಂಗಡಿ ಬಳಿ ಇಳಿದರು. ಶೂ ತಯಾರಿಸುವುದು ಹೇಗೆ ಎಂಬುದನ್ನೂ ನನ್ನಿಂದ ಕಲಿತರು. ಜತೆಗೆ ದೆಹಲಿಗೆ ತೆರಳುತ್ತಿದ್ದಂತೆ ಹೊಸ ಹೊಲಿಗೆ ಯಂತ್ರ ಮತ್ತು ಇತರ ಪರಿಕರಗಳನ್ನು ಕಳುಹಿಸಿದರು. ಅವರ ಪ್ರೋತ್ಸಾಹದಿಂದ ಸದ್ಯ ಎರಡು ಅಂಗಡಿಗಳನ್ನು ಹೊಂದಿದ್ದೇನೆ. ಅವರು ಅಂದು ನೀಡಿದ ಬೆಂಬಲ ಮತ್ತು ಪ್ರೋತ್ಸಾಹದಾಯಕ ಮಾತುಗಳು ಯಶಸ್ಸಿನ ಹಾದಿಯತ್ತ ಹೊರಳುವಂತೆ ಮಾಡಿದವು’ ಎಂದು ನೆನಪಿಸಿಕೊಂಡಿದ್ದಾರೆ.

‘ನಾನು ಹೊಲಿದುಕೊಟ್ಟ ಶೂಗೆ ಭಾರೀ ಮೊತ್ತದ ಹಣ ನೀಡಲು ರಾಹುಲ್ ಗಾಂಧಿ ಮುಂದಾದರು. ಆದರೆ ಅಷ್ಟೊಂದು ಹಣ ನನಗೆ ಬೇಡವೆಂದೆ’ ಎಂದಿದ್ದಾರೆ.

ಚರ್ಮದ ಕೆಲಸ ಮಾಡುವ ಸಮುದಾಯದ ಕೌಶಲ ಮತ್ತು ಜ್ಞಾನವನ್ನು ಅಪಾರವಾಗಿ ಹೊಗಳಿದ ರಾಹುಲ್‌, ಈ ಸಮುದಾಯಕ್ಕೆ ಸಮಾಜದಲ್ಲಿ ಹೆಚ್ಚಿನ ಗೌರವ ಸಿಗದಿರುವುದು ವಿಪರ್ಯಾಸ. ರಾಮ್‌ಚೇತ್ ಅವರ ಕೌಶಲ ಅದ್ಭುತ. ಅವರ ಕೌಶಲಕ್ಕೆ ಆಧುನಿಕ ಸ್ಪರ್ಶದ ಅಗತ್ಯವಿದೆ. ಅದಕ್ಕೆ ನಾನು ನೆರವಾಗುವೆ’ ಎಂದಿದ್ದಾರೆ.

‘ಜಗತ್ತಿನಲ್ಲಿ ಇಂದಿಗೂ ಅತಿ ಹೆಚ್ಚು ಬೇಡಿಕೆಯ ಪಾದರಕ್ಷೆಯು ಕೈಯಿಂದಲೇ ತಯಾರಿಸಿದ್ದಾಗಿದೆ’ ಎಂದು ಸಂಸದೆ ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.