
ಹೈದರಾಬಾದ್: ‘ಕಳೆದ 70 ವರ್ಷಗಳಲ್ಲಿ ತನ್ನ ಕಾರ್ಯಕರ್ತರ ಕಠಿಣ ಪರಿಶ್ರಮ, ತ್ಯಾಗ, ಭಕ್ತಿ ಮತ್ತು ರಾಷ್ಟ್ರೀಯ ಹಿತಾಸಕ್ತಿಯ ಸಿದ್ಧಾಂತದಿಂದಾಗಿ ಭಾರತೀಯ ಮಜ್ದೂರ್ ಸಂಘ (ಬಿಎಂಎಸ್) ವಿಶ್ವದ ಅತಿದೊಡ್ಡ ಕಾರ್ಮಿಕ ಸಂಘವಾಗಿ ರೂಪುಗೊಂಡಿದೆ’ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್) ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಗುರುವಾರ ಹೇಳಿದರು.
ತೆಲಂಗಾಣದಲ್ಲಿ ಬಿಎಂಎಸ್‌ನ ಹೊಸ ಕಚೇರಿಯ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ‘ಕಾರ್ಯಕರ್ತರು ತಮ್ಮ ಕೆಲಸ, ಬದ್ಧತೆ ಮತ್ತು ಸಿದ್ಧಾಂತವನ್ನು ಹಲವು ಪಟ್ಟು ವಿಸ್ತರಿಸಬೇಕು’ ಎಂದು ಸಲಹೆ ನೀಡಿದರು.
‘ಕಾರ್ಯಕರ್ತರಿಗೆ ಮತ್ತಷ್ಟು ತರಬೇತಿಯ ಅಗತ್ಯವಿದೆ. ಕಾರ್ಮಿಕ ಸಂಹಿತೆಗಳು ಸೇರಿದಂತೆ ವಿವಿಧ ನಿರ್ಣಾಯಕ ವಿಷಯಗಳನ್ನು ಅಧ್ಯಯನ ಮಾಡಬೇಕಾಗಿದೆ’ ಎಂದು ಹೇಳಿದರು.
‘ನೀವು ಮಾಡುವ ಕೆಲಸ ಅಥವಾ ನಿರ್ಮಿಸುವ ವಸ್ತು ಸಣ್ಣದಿರಬಹುದು. ಆದರೆ, ಸಿದ್ಧಾಂತ ಮತ್ತು ಚಿಂತನೆ ಉನ್ನತ ಮಟ್ಟದಲ್ಲಿರಬೇಕು’ ಎಂದು ಸಲಹೆ ನೀಡಿದರು.
ಆರ್‌ಎಸ್‌ಎಸ್‌ನ ಅಖಿಲ ಭಾರತೀಯ ಕಾರ‌್ಯಕಾರಿಣಿ ಸದಸ್ಯ ಭಾಗಯ್ಯ, ಬಿಎಂಎಸ್‌ನ ಹಲವು ಮುಖಂಡರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ವಿಶ್ವ ಸಂಘ ಶಿಬಿರದ ಸಮಾರೋಪ 28ರಂದು
ಹೈದರಾಬಾದ್: ಅಂತರರಾಷ್ಟ್ರೀಯ ಹಿಂದೂ ಸಂಘಟನೆಗಳ ಸಭೆಯಾದ ‘ವಿಶ್ವ ಸಂಘ ಶಿಬಿರ’ದ ಸಮಾರೋಪ ಸಮಾರಂಭ ಡಿಸೆಂಬರ್ 28ರಂದು ನಡೆಯಲಿದ್ದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಭಾಗವಹಿಸಲಿದ್ದಾರೆ. ಕನ್ಹಾ ಶಾಂತಿ ವನದ ಬಳಿ ಗುರುವಾರ ಆರಂಭವಾದ ಶಿಬಿರದಲ್ಲಿ ಆರ್‌ಎಸ್‌ಎಸ್ ಹಿಂದೂ ಸೇವಾ ಸಂಘ ವಿಎಚ್‌ಪಿ ಸೇರಿದಂತೆ ವಿವಿಧ ಸಂಘಟನೆಗಳ ಸದಸ್ಯರು ಕುಟುಂಬಸ್ಥರು ಭಾಗವಹಿಸಿದ್ದಾರೆ. ಮೂರು ದಿನಗಳವರೆಗೆ ನಡೆಯುವ 75 ದೇಶಗಳ 2 ಸಾವಿರಕ್ಕೂ ಹೆಚ್ಚಿನ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.