ADVERTISEMENT

ತಮಿಳುನಾಡು| ಹೆಡ್‌ ಕಾನ್‌ಸ್ಟೆಬಲ್‌ಗೆ ಶೂ ಹಿಡಿದುಕೊಳ್ಳಲು ಹೇಳಿದ ಡಿ.ಸಿ: ಟೀಕೆ

ಪಿಟಿಐ
Published 12 ಏಪ್ರಿಲ್ 2023, 15:58 IST
Last Updated 12 ಏಪ್ರಿಲ್ 2023, 15:58 IST
.
.   

ಕಲ್ಲಕುರಿಚಿ, (ತಮಿಳುನಾಡು) (ಪಿಟಿಐ): ಇಲ್ಲಿನ ಜಿಲ್ಲಾಧಿಕಾರಿಯೊಬ್ಬರು ಹೆಡ್‌ ಕಾನ್‌ಸ್ಟೆಬಲ್‌ಗೆ ತಮ್ಮ ಶೂ ಹಿಡಿದುಕೊಳ್ಳಲು ಹೇಳಿರುವುದು ವಿವಾದಕ್ಕೆ ಕಾರಣವಾಗಿದೆ. ಆದರೆ ಆರೋಪವನ್ನು ಜಿಲ್ಲಾಧಿಕಾರಿ ಅಲ್ಲಗಳೆದಿದ್ದಾರೆ.

ಕಲ್ಲಕುರಿಚಿ ಜಿಲ್ಲಾಧಿಕಾರಿ ಸರವನ್‌ ಕುಮಾರ್‌ ಜಟಾವತ್‌ ಅವರು, ದೇಶದಾದ್ಯಂತ ಲೈಂಗಿಕ ಅಲ್ಪಸಂಖ್ಯಾತರು ಆಚರಿಸುವ ವಿಶ್ವಪ್ರಸಿದ್ಧ ‘ಕೂವಾಗಂ’ ಹಬ್ಬದ ಹಿನ್ನೆಲೆಯಲ್ಲಿ ಸಿದ್ಧತೆಗಳನ್ನು ಪರಿಶೀಲಿಸಲು ಕೂವಾಗಂ ಕುಥಂಡವರ್‌ ದೇಗುಲಕ್ಕೆ ಭೇಟಿ ನೀಡಿದ್ದರು. ದೇಗುಲ ಪ್ರವೇಶಕ್ಕೂ ಮೊದಲು ಶೂ ಕಳಚಿದ ಅವರು ಅದನ್ನು ಹಿಡಿದುಕೊಳ್ಳುವಂತೆ ಹೆಡ್‌ ಕಾನ್‌ಸ್ಟೆಬಲ್‌ಗೆ ತಿಳಿಸಿದರು ಎನ್ನಲಾಗಿದೆ. ಈ ದೃಶ್ಯಗಳಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ.

ಈ ಕುರಿತು ಪ್ರತಿಕ್ರಿಯಿಸಿದ ಸರವನ್‌ ಕುಮಾರ್‌, ಶೂ ಹಿಡಿದುಕೊಳ್ಳುವಂತೆ ಹೆಡ್‌ ಕಾನ್‌ಸ್ಟೆಬಲ್‌ಗೆ ಹೇಳಿಯೇ ಇಲ್ಲ. ವಿಡಿಯೊವನ್ನು ತಿರುಚಲಾಗಿದೆ. ಸ್ಥಳದಲ್ಲಿದ್ದ ಪತ್ರಕರ್ತರಿಗೆ ಇದು ಸುಳ್ಳು ಎಂದು ಗೊತ್ತಿದೆ. ಸ್ಥಳದಲ್ಲಿ ಇರದ ಕೆಲವರು ವಿಡಿಯೊವನ್ನು ತಿರುಚಿ ತಪ್ಪಾಗಿ ಅರ್ಥೈಸುತ್ತಿದ್ದಾರೆ’ ಎಂದು ಆರೋಪಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.