ADVERTISEMENT

ದೇಶೀಯ ಕೋವಿಡ್‌ ಲಸಿಕೆ 'ಕೊವ್ಯಾಕ್ಸಿನ್' 3ನೇ ಹಂತದ ಪ್ರಯೋಗಕ್ಕೆ ಡಿಸಿಜಿಐ ಅನುಮತಿ

ಏಜೆನ್ಸೀಸ್
Published 23 ಅಕ್ಟೋಬರ್ 2020, 16:26 IST
Last Updated 23 ಅಕ್ಟೋಬರ್ 2020, 16:26 IST
ಕೊವ್ಯಾಕ್ಸಿನ್‌ ಲಸಿಕೆ
ಕೊವ್ಯಾಕ್ಸಿನ್‌ ಲಸಿಕೆ   

ನವದೆಹಲಿ: ದೇಶೀಯವಾಗಿ ಅಭಿವೃದ್ಧಿ ಪಡಿಸಲಾಗಿರುವ 'ಕೊವ್ಯಾಕ್ಸಿನ್‌' ಕೋವಿಡ್‌–19 ಲಸಿಕೆಯ ಮೂರನೇ ಹಂತದ ಕ್ಲಿನಿಕಲ್‌ ಟ್ರಯಲ್‌ ನಡೆಸಲು ಭಾರತ್‌ ಬಯೋಟೆಕ್‌ಗೆ ಡ್ರಗ್ಸ್‌ ಕಂಟ್ರೋಲರ್‌ ಜನರಲ್‌ ಆಫ್‌ ಇಂಡಿಯಾ (ಡಿಸಿಜಿಐ) ಶುಕ್ರವಾರ ಅನುಮತಿ ನೀಡಿದೆ.

ಭಾರತ್‌ ಬಯೋಟೆಕ್‌ ಕೋವಿಡ್‌–19 ಲಸಿಕೆ ಕುರಿತು ತಜ್ಞರ ಸಮಿತಿ ಮಾಡಿರುವ ಶಿಫಾರಸನ್ನು ಡಿಸಿಜಿಐ ಪರಿಶೀಲಿಸಿದೆ. ಭಾರತದಲ್ಲಿ ಕೊವ್ಯಾಕ್ಸಿನ್‌ ಲಸಿಕೆಯ ಮನುಷ್ಯರ ಮೇಲಿನ ಮೂರನೇ ಹಂತದ ಪ್ರಯೋಗಕ್ಕೆ ಅನುಮತಿ ನೀಡಿರುವುದಾಗಿ ಸರ್ಕಾರದ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ಎಎನ್‌ಐ ವರದಿ ಮಾಡಿದೆ.

ಲಸಿಕೆಯ ಮೂರನೇ ಹಂತದ ಪ್ರಯೋಗಕ್ಕೆ ಅನುಮತಿ ನೀಡುವಂತೆ ಕಂಪನಿಯು ಅಕ್ಟೋಬರ್ 2ರಂದು ಡಿಸಿಜಿಐಗೆ ಮನವಿ ಮಾಡಿತ್ತು ಹಾಗೂ ಅಕ್ಟೋಬರ್‌ 5ರಂದು ಕ್ಲಿನಿಕಲ್‌ ಟ್ರಯಲ್‌ ಮೊದಲು ಮತ್ತು 2ನೇ ಹಂತಗಳ ಸುರಕ್ಷತೆ ಮತ್ತು ಪ್ರತಿರೋಧ ಸಾಮರ್ಥ್ಯಕ್ಕೆ ಸಂಬಂಧಿಸಿದ ಸಂಪೂರ್ಣ ದತ್ತಾಂಶವನ್ನು ಸಲ್ಲಿಸಿತ್ತು.

18 ವರ್ಷಕ್ಕಿಂತ ಮೇಲ್ಪಟ್ಟ ವಯಸ್ಸಿನ 28,500 ಮಂದಿಯನ್ನು ಪ್ರಯೋಗಕ್ಕೆ ಒಳಪಡಿಸುವುದಾಗಿಯೂ ದೆಹಲಿ, ಮುಂಬೈ, ಪಟ್ನಾ, ಲಖನೌ ಸೇರಿ 19 ಕಡೆಗಳಲ್ಲಿ ನಡೆಸುವುದಾಗಿಯೂ ಮನವಿಯಲ್ಲಿ ಉಲ್ಲೇಖಿಸಲಾಗಿತ್ತು.

ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್‌) ಸಹಯೋಗದೊಂದಿಗೆ ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಕಂಪನಿ ಈ ಲಸಿಕೆಯನ್ನು ಅಭಿವೃದ್ಧಿಪಡಿಸಿದೆ. ಮೊದಲು ಮತ್ತು ಎರಡನೇ ಹಂತದಲ್ಲಿ ಲಸಿಕೆ ಪ್ರಯೋಗಕ್ಕೆ ಭಾರತ್‌ ಬಯೋಟೆಕ್‌ಗೆ ಜುಲೈನಲ್ಲಿ ಅನುಮತಿ ನೀಡಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.