ಸಾವು
ಪ್ರಾತಿನಿಧಿಕ ಚಿತ್ರ
ಗರಿಯಾಬಂದ್: ಆಸ್ಪತ್ರೆಯವರು ವಾಹನ ನೀಡಲು ನಿರಾಕರಿಸಿದ್ದರಿಂದ ಮೃತದೇಹವನ್ನು ಮಂಚದ ಮೇಲೆಯೇ ಹೊತ್ತೊಯ್ದಿರುವ ಘಟನೆ ಛತ್ತೀಸಗಢದ ಗರಿಯಾಬಂದ್ ಜಿಲ್ಲೆಯಲ್ಲಿ ನಡೆದಿದೆ.
ಇಲ್ಲಿಯ ಅಮ್ಲಿಪಡರ್‌ನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇಚ್ಚಾಬಾಯಿ ಪಟೇಲ್ ಎಂಬ 60 ವರ್ಷದ ವೃದ್ಧೆಯು ಸೋಮವಾರ ಮೃತಪಟ್ಟಿದ್ದಾರೆ. ಮೃತದೇಹವನ್ನು ಕೊಂಡೊಯ್ಯಲು ವಾಹನವನ್ನು ಕಳುಹಿಸುವಂತೆ ಮೃತರ ಕುಟುಂಬಸ್ಥರು ಕೇಳಿಕೊಂಡಿದ್ದಾರೆ. ಆದರೆ, ಇದಕ್ಕೆ ಆಸ್ಪತ್ರೆಯವರು ನಿರಾಕರಿಸಿದ್ದಾರೆ. ಹೀಗಾಗಿ ಕುಟುಂಬಸ್ಥರು ಮೃತದೇಹವನ್ನು ಇರಿಸಿದ್ದ ಆಸ್ಪತ್ರೆಯ ಮಂಚವನ್ನೇ 2.5 ಕಿ.ಮೀ. ದೂರ ಹೆಗಲ ಮೇಲೆ ಹೊತ್ತು ಸಾಗಿದ್ದಾರೆ. ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ.
‘ಖಾಸಗಿ ವಾಹನದವರು ದುಬಾರಿ ಮೊತ್ತವನ್ನು ಬಾಡಿಗೆ ಕೇಳಿದರು. ಅಷ್ಟು ಹಣ ನೀಡಲು ನಮ್ಮಿಂದ ಸಾಧ್ಯವಿರಲಿಲ್ಲ. ಹೀಗಾಗಿ ನಮಗೆ ಬೇರೆ ದಾರಿ ಇರಲಿಲ್ಲ’ ಎಂದು ಮೃತರ ಕುಟುಂಬಸ್ಥರಾದ ದೀಪ್‌ಚಂದ್ ಪಟೇಲ್ ಹೇಳಿದರು.
ಈ ಬಗ್ಗೆ ಪ್ರತಿಕ್ರಿಯಿಸಿರುವ ಜಿಲ್ಲಾಧಿಕಾರಿ ಭಗವಾನ್ ಸಿಂಗ್, ‘ಘಟನೆ ಬಗ್ಗೆ ಜಿಲ್ಲಾ ವೈದ್ಯಕೀಯ ಮತ್ತು ಆರೋಗ್ಯ ಅಧಿಕಾರಿಯೊಂದಿಗೆ ಮಾತನಾಡಿದ್ದೇನೆ. 26 ಕಿ.ಮೀ ದೂರದಿಂದ ವಾಹನ ಬರಲಿದೆ ಎಂದು ಆಸ್ಪತ್ರೆಯವರು ತಿಳಿಸಿದ್ದರು. ಅದಕ್ಕೆ ಕಾಯದೇ ಕುಟುಂಬಸ್ಥರು ಶವವನ್ನು ಹೊತ್ತೊಯ್ದಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಇಂಥ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳಲು ನಿರ್ದೇಶಿಸಲಾಗಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.