ADVERTISEMENT

2 ತಿಂಗಳ ಹಿಂದೆಯೇ ಮೃತಪಟ್ಟ ಮಹಿಳೆಗೂ ಕೋವಿಡ್ ಲಸಿಕೆ?!: ಗಂಡನಿಗೆ ಬಂತು ಸಂದೇಶ

ಐಎಎನ್ಎಸ್
Published 22 ಡಿಸೆಂಬರ್ 2021, 9:34 IST
Last Updated 22 ಡಿಸೆಂಬರ್ 2021, 9:34 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಪಟ್ನಾ: ಎರಡು ತಿಂಗಳ ಹಿಂದೆ ಸಾವಿಗೀಡಾಗಿದ್ದ ಮಹಿಳೆಯೊಬ್ಬರಿಗೆ ಕೋವಿಡ್-19 ಲಸಿಕೆ ಎರಡನೇ ಡೋಸ್ ನೀಡಿಕೆ ಯಶಸ್ವಿಯಾಗಿದೆ ಎನ್ನುವ ಸಂದೇಶ ಬಂದಿದ್ದು, ಆಕೆಯ ಪತಿ ಅದನ್ನು ನೋಡಿ ಆಶ್ಚರ್ಯಕ್ಕೀಡಾಗಿದ್ದಾರೆ.

ಲಾಲೊ ದೇವಿ ಎಂಬುವವರ ಗಂಡ ರಾಮ್ ಉದ್ಗಾರ್ ಎಂಬುವವರು, 'ವೀರಪುರ ವಿಭಾಗದ ಖಾರ್ಮೌಲಿ ಗ್ರಾಮದಲ್ಲಿ ನನ್ನ ಹೆಂಡತಿ ಅನಾರೋಗ್ಯದಿಂದಾಗಿ ಸೆಪ್ಟೆಂಬರ್ 9 ರಂದು ಕೊನೆಯುಸಿರೆಳೆದಿದ್ದಳು. ಬಿಹಾರದ ಯೋಜನೆ ಮತ್ತು ಅಭಿವೃದ್ಧಿ ಇಲಾಖೆಯು ಮರಣ ಪ್ರಮಾಣಪತ್ರವನ್ನು ನೀಡಿದೆ. ಹೀಗಿದ್ದರೂ, ಆಕೆ ಮೃತಪಟ್ಟು ಎರಡು ತಿಂಗಳಾದ ಮೇಲೆ ಈಗ ಆರೋಗ್ಯ ಇಲಾಖೆಯಿಂದ ಕೋವಿಡ್ ಲಸಿಕೆ ಪ್ರಣಮಾಣಪತ್ರ ಲಭ್ಯವಾಗಿದೆ' ಎಂದು ತಿಳಿಸಿದ್ದಾರೆ.

ನವೆಂಬರ್ 25 ರಂದು ವೀರಪುರದ ಪ್ರಾಥಮಿಕ ಆರೋಗ್ಯ ಕೇಂದ್ರವು ಕಿಸಾನ್ ಭವನದ ಬಳಿ ಕೋವಿಡ್ ಲಸಿಕಾ ಕ್ಯಾಂಪ್ ಅನ್ನು ಆಯೋಜಿಸಿತ್ತು. ಅದಾದ ಬಳಿಕ ಆರೋಗ್ಯ ಅಧಿಕಾರಿಗಳು ಲಾಲೊ ದೇವಿ ಹೆಸರಲ್ಲಿ ಕೋವಿಡ್ ಲಸಿಕಾ ಸರ್ಟಿಫಿಕೇಟ್ ಅನ್ನು ನೀಡಿದ್ದಾರೆ.

ADVERTISEMENT

ಸತ್ತ ವ್ಯಕ್ತಿಯೊಬ್ಬರಿಗೆ ನೀಡಿರುವ ಕೋವಿಡ್ ಲಸಿಕೆ ಪ್ರಮಾಣಪತ್ರವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಅಪ್ಲೋಡ್ ಮಾಡಲಾಗಿದ್ದು, ಬೇಗುಸರಾಯ್ ಜಿಲ್ಲೆಯಾದ್ಯಂತ ಹರಿದಾಡುತ್ತಿದೆ.

ಬಿಹಾರದಲ್ಲಿ ಕೋವಿಡ್ ಲಸಿಕೆ ನೀಡಿರುವ ಅಂಕಿಅಂಶಗಳನ್ನು ಹೆಚ್ಚಾಗಿ ತೋರಿಸಲು ಮಾಡಿರುವ ಕುತಂತ್ರ ಎಂದು ಹಲವರು ದೂರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.