ADVERTISEMENT

ಉನ್ನಾವ್ ಪ್ರಕರಣ: ಕುಲದೀಪ್ ಸಿಂಗ್ ಅರ್ಜಿಗೆ ಪ್ರತಿಕ್ರಿಯೆ ಸಲ್ಲಿಸಲು CBIಗೆ ಸೂಚನೆ

ಪಿಟಿಐ
Published 3 ಡಿಸೆಂಬರ್ 2024, 14:06 IST
Last Updated 3 ಡಿಸೆಂಬರ್ 2024, 14:06 IST
bb
bb   

ನವದೆಹಲಿ: ಉನ್ನಾವ್ ಅತ್ಯಾಚಾರ ಪ್ರಕರಣದ ಸಂತ್ರಸ್ತೆಯ ತಂದೆ ಪೊಲೀಸ್ ವಶದಲ್ಲಿ ಇದ್ದಾಗ ಮೃತಪಟ್ಟ ಪ್ರಕರಣದಲ್ಲಿ ತನಗೆ ವಿಧಿಸಿರುವ 10 ವರ್ಷಗಳ ಜೈಲು ಶಿಕ್ಷೆಯನ್ನು ವೈದ್ಯಕೀಯ ನೆಲೆಯಲ್ಲಿ ಅಮಾನತಿನಲ್ಲಿ ಇರಿಸಬೇಕು ಎಂದು ಬಿಜೆಪಿಯ ಉಚ್ಚಾಟಿತ ಮುಖಂಡ ಕುಲದೀಪ್ ಸಿಂಗ್ ಸೆಂಗರ್ ಸಲ್ಲಿಸಿರುವ ಅರ್ಜಿಗೆ ಪ್ರತಿಕ್ರಿಯೆ ಸಲ್ಲಿಸುವಂತೆ ಸಿಬಿಐ ಅಧಿಕಾರಿಗಳಿಗೆ ದೆಹಲಿ ಹೈಕೋರ್ಟ್‌ ಮಂಗಳವಾರ ಸೂಚಿಸಿದೆ.

ಸಿಂಗ್ ಆರೋಗ್ಯ ಸ್ಥಿತಿ ಕುರಿತು ವರದಿ ಸಲ್ಲಿಸುವಂತೆ ಜೈಲು ಅಧಿಕಾರಿಗಳಿಗೆ ಸೂಚನೆ ನೀಡಿರುವ ನ್ಯಾಯಮೂರ್ತಿ ಮನೋಜ್ ಕುಮಾರ್ ಒಹರಿ ಅವರು ವಿಚಾರಣೆಯನ್ನು ಜನವರಿ 13ಕ್ಕೆ ಮುಂದೂಡಿದ್ದಾರೆ.

ತನ್ನನ್ನು ದೋಷಿ ಎಂದು ಘೋಷಿಸಿರುವುದನ್ನು ಪ್ರಶ್ನಿಸಿ ಸಿಂಗ್ ಸಲ್ಲಿಸಿರುವ ಅರ್ಜಿಯ ವಿಚಾರಣೆ ಬಾಕಿ ಇರುವಾಗ, ಶಿಕ್ಷೆಯನ್ನು ಅಮಾನತಿನಲ್ಲಿ ಇರಿಸಲು ಹೈಕೋರ್ಟ್‌ ಈ ವರ್ಷದ ಜೂನ್‌ನಲ್ಲಿ ನಿರಾಕರಿಸಿದೆ ಎಂದು ಸಿಬಿಐ ಪರ ವಕೀಲರು ಪೀಠಕ್ಕೆ ವಿವರ ನೀಡಿದರು.

ADVERTISEMENT

ಆರೋಗ್ಯ ಹದಗೆಡುತ್ತಿರುವ ಕಾರಣಕ್ಕೆ ಶಿಕ್ಷೆಯನ್ನು ಅಮಾನತಿನಲ್ಲಿ ಇರಿಸುವಂತೆ ಕೋರಲಾಗುತ್ತಿದೆ ಎಂದು ಸಿಂಗ್ ಪರ ವಕೀಲರು ಹೇಳಿದರು. ಮೃತ ವ್ಯಕ್ತಿಯ ಪುತ್ರಿಯ ಮೇಲೆ ಅತ್ಯಾಚಾರ ಎಸಗಿದ್ದಕ್ಕಾಗಿ ಸಿಂಗ್‌ಗೆ ಈಗಾಗಲೇ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.

ಉನ್ನಾವ್ ಅತ್ಯಾಚಾರ ಪ್ರಕರಣದಲ್ಲಿ ವಿಚಾರಣಾ ನ್ಯಾಯಾಲಯ ನೀಡಿದ ಆದೇಶ ಪ್ರಶ್ನಿಸಿ ಸಿಂಗ್ ಸಲ್ಲಿಸಿರುವ ಅರ್ಜಿಯು ಹೈಕೋರ್ಟ್‌ನಲ್ಲಿ ಬಾಕಿ ಇದೆ. ಬಾಲಕಿಯನ್ನು ಸಿಂಗ್, 2017ರಲ್ಲಿ ಅಪಹರಿಸಿ, ಆಕೆಯ ಮೇಲೆ ಅತ್ಯಾಚಾರ ಎಸಗಿದ್ದ.

ಬಾಲಕಿಯ ತಂದೆಯನ್ನು ಸಿಂಗ್‌ ಚಿತಾವಣೆಯಿಂದ ಬಂಧಿಸಲಾಗಿತ್ತು. ಅವರು 2018ರ ಏಪ್ರಿಲ್‌ನಲ್ಲಿ ಪೊಲೀಸ್ ದೌರ್ಜನ್ಯದಿಂದಾಗಿ ಮೃತಪಟ್ಟಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.