ADVERTISEMENT

ಪುಣೆ: ಬಿಪಿಒ ಉದ್ಯೋಗಿ ಅತ್ಯಾಚಾರ, ಕೊಲೆ

ಬಿಪಿಒ ಉದ್ಯೋಗಿ ಮೇಲೆ ನಡೆದ ಅತ್ಯಾಚಾರ ಕೊಲೆ ಪ್ರಕರಣ

ಪಿಟಿಐ
Published 29 ಜುಲೈ 2019, 20:05 IST
Last Updated 29 ಜುಲೈ 2019, 20:05 IST

ಮುಂಬೈ: ಪುಣೆಯ ಬಿಪಿಒ ಕಂಪನಿಯ ಉದ್ಯೋಗಿ ಮೇಲೆ 2007ರಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಇಬ್ಬರು ಅಪರಾಧಿಗಳಿಗೆ ನೀಡಿದ್ದ ಮರಣದಂಡನೆಯನ್ನು ಪರಿವರ್ತಿಸಿದ ಬಾಂಬೆ ಹೈಕೋರ್ಟ್‌, ಜೀವಾವಧಿ ಶಿಕ್ಷೆ ವಿಧಿಸಿ ಸೋಮವಾರ ಆದೇಶಿಸಿದೆ. 35 ವರ್ಷಗಳ ಕಾಲ ಜೈಲಿನಲ್ಲೇ ಶಿಕ್ಷೆ ಅನುಭವಿಸಬೇಕು ಎಂದು ಆದೇಶದಲ್ಲಿ ತಿಳಿಸಿದೆ.

ಅಪರಾಧಿಗಳಾದ ಪುರುಷೋತ್ತಮ ಬೋರಾಟೆ (38) ಮತ್ತು ಪ್ರದೀಪ್‌ ಕೊಕಾಡೆಗೆ (32) ಕಳೆದ ಜೂನ್‌ 24 ರಂದು ಮರಣದಂಡನೆಯನ್ನು ಕಾರ್ಯಗತಗೊಳಿಸಬೇಕಿತ್ತು. ಆದರೆ, ಹೈಕೋರ್ಟ್‌ ಮುಂದಿನ ಆದೇಶದವರೆಗೆ ಇದನ್ನು ಕಾರ್ಯಗತಗೊಳಿಸಬಾರದು ಎಂದು ಜೂನ್‌ 21ರಂದೇ ಆದೇಶಿಸಿತ್ತು.

ಮರಣದಂಡನೆಗೆ ತಡೆ ನೀಡಬೇಕು ಎಂದು ಕೋರಿ ಅಪರಾಧಿಗಳು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾ. ಬಿ.ಪಿ.ಧರ್ಮಾಧಿಕಾರಿ ಮತ್ತು ಸ್ವಪ್ನಾ ಜೋಶಿ ಅವರಿದ್ದ ವಿಭಾಗೀಯ ಪೀಠ ನಡೆಸಿತು.

ADVERTISEMENT

2007ರ ನವೆಂಬರ್‌ 1 ರಂದು ‘ವಿಪ್ರೋ’ ಬಿಪಿಒ ಕಂಪನಿಯ 22 ವರ್ಷ ವಯಸ್ಸಿನ ಉದ್ಯೋಗಿಯನ್ನು ಅಪಹರಿಸಿ, ಅತ್ಯಾಚಾರ ನಡೆಸಿ ಕೊಲೆ ಮಾಡಲಾಗಿತ್ತು. ಕಂಪನಿ ನಿಗದಿಪಡಿಸಿದ್ದ ಕ್ಯಾಬ್‌ನಲ್ಲಿ ಉದ್ಯೋಗಿಯು ರಾತ್ರಿ ಪಾಳಿ ಕೆಲಸಕ್ಕೆ ಬರುವಾಗ ಈ ಘಟನೆ ನಡೆದಿತ್ತು. ಕ್ಯಾಬ್‌ ಚಾಲಕ ಬೋರಾಟೆ ಹಾಗೂ ಈತನ ಸ್ನೇಹಿತ ಕೊಕಾಡೆ ಸೇರಿ ಈ ಕೃತ್ಯ ಎಸಗಿದ್ದರು.

ಆರೋಪಿಗಳಿಬ್ಬರಿಗೂ 2012ರಲ್ಲಿ ವಿಚಾರಣಾಧೀನ ನ್ಯಾಯಾಲಯ ಮರಣದಂಡನೆ ವಿಧಿಸಿತ್ತು. 2015ರಲ್ಲಿ ಸುಪ್ರೀಂ ಕೋರ್ಟ್‌ ಸಹ ಆದೇಶವನ್ನು ಎತ್ತಿ ಹಿಡಿದಿತ್ತು. ಅಪರಾಧಿಗಳು ಸಲ್ಲಿಸಿದ್ದ ದಯಾ ಅರ್ಜಿಯನ್ನು 2016ರಲ್ಲಿ ಮಹಾರಾಷ್ಟ್ರದ ರಾಜ್ಯಪಾಲರು ಮತ್ತು 2017ರಲ್ಲಿ ರಾಷ್ಟ್ರಪತಿಗಳು ತಿರಸ್ಕರಿಸಿದ್ದರು. ಮರಣದಂಡನೆ ಕಾರ್ಯಗತಗೊಳಿಸಲು ಜೂನ್‌ 24 ನಿಗದಿಪಡಿಸಿ ವಿಚಾರಣಾಧೀನ ನ್ಯಾಯಾಲಯ ಏಪ್ರಿಲ್‌ 10 ರಂದು ವಾರಂಟ್‌ ಹೊರಡಿಸಿತ್ತು.

ಈ ಶಿಕ್ಷೆ ಕಾರ್ಯಗತಗೊಳಿಸಲು ವಿಳಂಬ ಆಗಿರುವುದನ್ನು ಗಣನೆಗೆ ತೆಗೆದುಕೊಂಡು ಹೈಕೋರ್ಟ್‌ ಆದೇಶ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.