ಲಖನೌ: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಮತ್ತೊಂದು ಜೀವ ಬೆದರಿಕೆ ಸಂದೇಶ ಬಂದಿದ್ದು, 'ಸದ್ಯದಲ್ಲಿಯೇ ಸಿಎಂ ಯೋಗಿಯನ್ನು ಕೊಲ್ಲುತ್ತೇನೆ' ಎಂದು ತುರ್ತು ಸೇವೆಗಳಿಗಾಗಿ ಸರ್ಕಾರ ಪ್ರಾರಂಭಿಸಿರುವ ‘ಡಯಲ್ 112‘ ಸಂಖ್ಯೆಗೆ ಸಂದೇಶ ಬಂದಿದೆ ಎಂದು ಸುದ್ದಿ ಸಂಸ್ಥೆ ಎಎನ್ಐ ವರದಿ ಮಾಡಿದೆ.
‘ಬೆದರಿಕೆ ಸಂದೇಶ ಬಂದ ತಕ್ಷಣ ಎಚ್ಚೆತ್ತ 112 ಆಪರೇಷನ್ ಕಮಾಂಡರ್ ಸುಶಾಂತ್ ಗಾಲ್ಫ್ ಸಿಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಆರೋಪಿಯ ಮೇಲೆ ಲಖನೌದಲ್ಲಿ ಪ್ರಕರಣ ದಾಖಲಿಸಲಾಗಿದೆ‘ ಎಂದು ಪೊಲೀಸರು ತಿಳಿಸಿದ್ದಾರೆ.
‘ಮುಖ್ಯಮಂತ್ರಿಯವರಿಗೆ ಜೀವ ಬೆದರಿಕೆ ಸಂದೇಶ ಕಳುಹಿಸಿದ ಆರೋಪ ಮೇಲೆ ಅಪರಿಚಿತ ವ್ಯಕ್ತಿಯನ್ನು ಬಂಧಿಸಿದ್ದು, ಆರೋಪಿಯ ವಿರುದ್ಧ ಸೆಕ್ಷನ್ 506, 507 ಮತ್ತು 66 ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ‘ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಹಿಂದೆ 16 ವರ್ಷದ ಶಾಲಾ ಬಾಲಕನೊಬ್ಬ ಪ್ರಧಾನಿ ನರೇಂದ್ರ ಮೋದಿ ಮತ್ತು ಯೋಗಿ ಆದಿತ್ಯನಾಥ್ ಅವರನ್ನು ಹತ್ಯೆ ಮಾಡುವುದಾಗಿ ಮಾಧ್ಯಮ ಸಂಸ್ಥೆಗೆ ಇ–ಮೇಲೆ ಮೂಲಕ ಸಂದೇಶ ಕಳುಹಿಸಿದ್ದು, ಆತನನ್ನು ನೋಯ್ದಾ ಪೊಲೀಸರು ಬಂಧಿಸಿದ್ದರು. ಇದು ಯೋಗಿ ಆದಿತ್ಯನಾಥ್‌ಗೆ ಬಂದ ಎರಡನೇ ಜೀವ ಬೆದರಿಕೆ ಪ್ರಕರಣವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.