ADVERTISEMENT

ಪ್ರಧಾನಿ ಮೋದಿ ವಿರುದ್ಧದ ದೂರು: 5ರೊಳಗೆ ಇತ್ಯರ್ಥಗೊಳಿಸಿ: ಸುಪ್ರೀಂ ಕೋರ್ಟ್‌

ನೀತಿಸಂಹಿತೆ ಉಲ್ಲಂಘನೆ ಆರೋಪ

​ಪ್ರಜಾವಾಣಿ ವಾರ್ತೆ
Published 2 ಮೇ 2019, 20:20 IST
Last Updated 2 ಮೇ 2019, 20:20 IST
ನರೇಂದ್ರ ಮೋದಿ
ನರೇಂದ್ರ ಮೋದಿ    

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಅವರ ವಿರುದ್ಧದ ಚುನಾವಣಾ ನೀತಿಸಂಹಿತೆ ಉಲ್ಲಂಘನೆಯ ದೂರುಗಳನ್ನು ಇದೇ ಭಾನುವಾರದ (ಮೇ 5) ಒಳಗೆ ಇತ್ಯರ್ಥಪಡಿಸುವಂತೆ ಸುಪ್ರೀಂ ಕೋರ್ಟ್‌ ಗುರುವಾರ ಚುನಾವಣಾ ಆಯೋಗಕ್ಕೆ ಸೂಚಿಸಿತು.

ದ್ವೇಷದ ಭಾಷಣ ಮಾಡಲಾಗಿದೆ, ಚುನಾವಣಾ ಪ್ರಚಾರಕ್ಕೆ ಸೇನೆ ಹೆಸರು ಬಳಸಲಾಗಿದೆ. ಇದು, ನೀತಿ ಸಂಹಿತೆಯ ಉಲ್ಲಂಘನೆ ಎಂದು ದೂರಿ ಕಾಂಗ್ರೆಸ್‌ ಸಂಸದೆ ಸುಶ್ಮಿತಾ ದೇವ್ ಸಲ್ಲಿಸಿದ ಅರ್ಜಿಯನ್ನು ಮೇ 6ರಂದು ವಿಚಾರಣೆಗೆ ಎತ್ತಿಕೊಳ್ಳಲು ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೊಯಿ ನೇತೃತ್ವದ ಪೀಠವು ನಿರ್ಧರಿಸಿತು.

ಚುನಾವಣಾ ಆಯೋಗದ ಪರ ಹಾಜರಿದ್ದ ಹಿರಿಯ ವಕೀಲ ರಾಕೇಶ್‌ ದ್ವಿವೇದಿ ಅವರು, ‘ಆಯೋಗ ಈಗಾಗಲೇ ಮೂರು ದೂರುಗಳ ವಿಚಾರಣೆ ನಡೆಸಿದೆ. ಇನ್ನೊಂದು ದಿನದಲ್ಲಿ ಮತ್ತೊಂದು ದೂರಿನ ವಿಚಾರಣೆ ನಡೆಯಲಿದೆ. ದೂರುಗಳ ವಿಚಾರಣೆಗೆ ಚುನಾವಣಾ ಸಮಿತಿಯ ಎಲ್ಲ ಸದಸ್ಯರ ಹಾಜರಿ ಅಗತ್ಯ. ಆದರೆ, ಆಯೋಗದ ಪ್ರಾಥಮಿಕ ಕರ್ತವ್ಯ ಚುನಾವಣೆ ನಡೆಸುವುದೇ ಆಗಿದೆ’ ಎಂದು ಹೇಳಿದರು.

ADVERTISEMENT

‘ಅವರು (ದೂರುದಾರರು) ಭಾಷಣದ ನಾಲ್ಕು ಸಾಲುಗಳನ್ನು ಉಲ್ಲೇಖಿಸಿ, ತೀರ್ಮಾನ ಮಾಡಬೇಕು ಎಂದು ಬಯಸುತ್ತಾರೆ. ನಾವು ಭಾಷಣದ ಪೂರ್ಣ ಪಾಠವನ್ನು ಪಡೆಯಬೇಕಾಗಿದೆ. ಬುಧವಾರದ ವೇಳೆಗೆ ಆಯೋಗ ಎಲ್ಲ ದೂರುಗಳ ವಿಚಾರಣೆ ನಡೆಸಲಿದೆ’ ಎಂದು ದ್ವಿವೇದಿ ಕೋರ್ಟ್‌ಗೆ ತಿಳಿಸಿದರು.

ಸುಶ್ಮಿತಾ ದೇವ್ ಪರ ವಾದ ಮಂಡಿಸಿದ ಹಿರಿಯ ವಕೀಲ ಎ.ಎಂ.ಸಿಂಘ್ವಿ ಅವರು, ‘ಒಟ್ಟು 11 ದೂರುಗಳನ್ನು ಸಲ್ಲಿಸಲಾಗಿದ್ದು, ಏಳು ದೂರುಗಳು ಬಾಕಿ ಉಳಿದಿವೆ’ ಎಂದು ಕೋರ್ಟ್‌ ಗಮನಕ್ಕೆತಂದರು.

ಅಣ್ವಸ್ತ್ರ‌: ಮತ್ತೆ ಮೋದಿ ಪರ ಆದೇಶ

ಚುನಾವಣಾ ಪ್ರಚಾರದ ವೇಳೆ ಅಣ್ವಸ್ತ್ರದ ವಿಚಾರವನ್ನು ಮಾತನಾಡುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿಲ್ಲ ಎಂದು ಚುನಾವಣಾ ಆಯೋಗ ಹೇಳಿದೆ. ಈ ಸಂಬಂಧ ಮೋದಿ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ಇತ್ಯರ್ಥಗೊಳಿಸಿದೆ.

‘ತಮ್ಮ ಬಳಿ ಅಣ್ವಸ್ತ್ರ ಬಟನ್ ಇದೆ, ಅಣ್ವಸ್ತ್ರ ಬಟನ್ ಇದೆ ಎಂದು ಪಾಕಿಸ್ತಾನ ಹೇಳುತ್ತಲೇ ಇರುತ್ತದೆ. ನಮ್ಮ ಬಳಿಯೂ ಅಣ್ವಸ್ತ್ರ ಇದೆ. ಅದನ್ನು ನಾವು ದೀಪಾವಳಿಗೆ ಎಂದು ಇಟ್ಟುಕೊಂಡಿದ್ದೇವಾ?’ ಎಂದು ಮೋದಿ ಅವರು ರಾಜಸ್ಥಾನದ ಬಾರ್ಮೇರ್‌ನಲ್ಲಿ ನಡೆದಿದ್ದ ರ‍್ಯಾಲಿಯಲ್ಲಿ ಹೇಳಿದ್ದರು.

ಈ ಹೇಳಿಕೆ ವಿರುದ್ಧ ಚುನಾವಣಾ ಆಯೋಗಕ್ಕೆ ಕಾಂಗ್ರೆಸ್‌ ದೂರು ನೀಡಿತ್ತು.

ಮೋದಿ ವಿರುದ್ಧ ದಾಖಲಾಗಿದ್ದ ಮೂರು ಪ್ರಕರಣಗಳ ತೀರ್ಪನ್ನು ಆಯೋಗವು ಈ ಮೂರು ದಿನಗಳಲ್ಲಿ ನೀಡಿದೆ. ಮೂರೂ ಪ್ರಕರಣಗಳಲ್ಲಿ ಮೋದಿ ತಪ್ಪು ಎಸಗಿಲ್ಲ ಎಂದು ಆಯೋಗ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.