ADVERTISEMENT

ಮಧ್ಯಪ್ರದೇಶದ ಮುಂದಿನ ಸಿಎಂ: ಸೋಮವಾರ ಆಯ್ಕೆ ಸಾಧ್ಯತೆ

ಶಿವರಾಜ್ ಸಿಂಗ್ ಚೌಹಾಣ್‌ ಅಥವಾ ಪ್ರಹ್ಲಾದ್‌ ಪಟೇಲ್‌

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2023, 16:28 IST
Last Updated 9 ಡಿಸೆಂಬರ್ 2023, 16:28 IST
<div class="paragraphs"><p>ಪ್ರಹ್ಲಾದ್‌ ಪಟೇಲ್‌ ಹಾಗೂ ಶಿವರಾಜ್ ಸಿಂಗ್ ಚೌಹಾಣ್‌</p></div>

ಪ್ರಹ್ಲಾದ್‌ ಪಟೇಲ್‌ ಹಾಗೂ ಶಿವರಾಜ್ ಸಿಂಗ್ ಚೌಹಾಣ್‌

   

ಪಿಟಿಐ ಚಿತ್ರ

ಭೋಪಾಲ್: ಮಧ್ಯಪ್ರದೇಶ ಬಿಜೆಪಿ ಶಾಸಕಾಂಗ ಪಕ್ಷದ ನಾಯಕನ ಆಯ್ಕೆಗೆ ಸೋಮವಾರ ಸಭೆ ನಡೆಯಲಿದ್ದು, ಮುಂದಿನ ಮುಖ್ಯಮಂತ್ರಿ ಯಾರಾಗುವರು ಎಂಬ ಕುತೂಹಲಕ್ಕೆ ತೆರೆಬೀಳುವ ಸಾಧ್ಯತೆಯಿದೆ.

ADVERTISEMENT

ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 230 ಸ್ಥಾನಗಳ ಪೈಕಿ 163ರಲ್ಲಿ ಗೆದ್ದು ಅಧಿಕಾರ ಹಿಡಿಯಲು ಸಜ್ಜಾಗಿದೆ. ನೂತನ ಮುಖ್ಯಮಂತ್ರಿಯ ಆಯ್ಕೆಗೆ ಪಕ್ಷದ ಹೈಕಮಾಂಡ್‌ ಹರಿಯಾಣ ಮುಖ್ಯಮಂತ್ರಿ ಮನೋಹರಲಾಲ್‌ ಖಟ್ಟರ್, ಬಿಜೆಪಿ ಒಬಿಸಿ ಮೋರ್ಚಾ ಅಧ್ಯಕ್ಷ ಕೆ.ಲಕ್ಷ್ಮಣ್ ಮತ್ತು ಕಾರ್ಯದರ್ಶಿ ಆಶಾ ಲಾಕ್ರ ಅವರನ್ನು ವೀಕ್ಷಕರನ್ನಾಗಿ ಶುಕ್ರವಾರ ನೇಮಿಸಿದೆ.

‘ಕೇಂದ್ರದ ವೀಕ್ಷಕರ ಸಮ್ಮುಖದಲ್ಲಿ ಸೋಮವಾರ ಸಂಜೆ ಸಭೆ ನಡೆಯಲಿದೆ’ ಎಂದು ಮಧ್ಯಪ್ರದೇಶದ ಬಿಜೆಪಿ ಮಾಧ್ಯಮ ವಿಭಾಗದ ಅಧ್ಯಕ್ಷ ಆಶೀಶ್‌ ಅಗರವಾಲ್ ಶನಿವಾರ ತಿಳಿಸಿದರು.

ಶಾಸಕಾಂಗ ಪಕ್ಷದ ಸಭೆಯನ್ನು ಭಾನುವಾರ ನಡೆಸಲು ತೀರ್ಮಾನಿಸಲಾಗಿತ್ತು. ಆದರೆ ವೀಕ್ಷಕರು ಪೂರ್ವನಿಗದಿತ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಬೇಕಿದ್ದರಿಂದ ಸೋಮವಾರಕ್ಕೆ ಮುಂದೂಡಲಾಗಿದೆ. ಕೇಂದ್ರದ ವೀಕ್ಷಕರು ಭಾನುವಾರ ರಾತ್ರಿ ಅಥವಾ ಸೋಮವಾರ ಬೆಳಿಗ್ಗೆ ಭೋಪಾಲ್‌ಗೆ ಬರಲಿದ್ದಾರೆ ಎಂದರು.

ಬಿಜೆಪಿಯು ಮುಖ್ಯಮಂತ್ರಿ ಸ್ಥಾನದ ಅಭ್ಯರ್ಥಿಯನ್ನು ಘೋಷಿಸದೆ ಮಧ್ಯಪ್ರದೇಶದಲ್ಲಿ ವಿಧಾನಸಭಾ ಚುನಾವಣೆ ಎದುರಿಸಿದ್ದು ಕಳೆದ 20 ವರ್ಷಗಳಲ್ಲಿ ಇದೇ ಮೊದಲು. ಪಕ್ಷದ ಹೈಕಮಾಂಡ್‌ ಶಿವರಾಜ್‌ ಸಿಂಗ್‌ ಚೌಹಾಣ್‌ ಅವರನ್ನು ಬದಲಿಸಲು ಬಯಸಿದರೆ, ಇತರೆ ಹಿಂದುಳಿದ ವರ್ಗಗಳಿಗೆ (ಒಬಿಸಿ) ಸೇರಿದ ಇನ್ನೊಬ್ಬ ಮುಖಂಡ ಪ್ರಹ್ಲಾದ್‌ ಪಟೇಲ್‌ ಅವರು ಸಿ.ಎಂ ಹುದ್ದೆಗೆ ಆಯ್ಕೆಯಾಗುವ ಸಾಧ್ಯತೆ ಅಧಿಕವಾಗಿದೆ ಎಂದು ಮೂಲಗಳು ಖಚಿತಪಡಿಸಿವೆ. 

ಲೋಧಿ ಸಮುದಾಯಕ್ಕೆ ಸೇರಿರುವ ಪಟೇಲ್, ನರಸಿಂಹಪುರ ಕ್ಷೇತ್ರದಿಂದ ಗೆದ್ದಿದ್ದಾರೆ. ಪಕ್ಷದ ಸೂಚನೆಯಂತೆ ಸ್ಪರ್ಧಿಸಿದ್ದ ಅವರು ಎರಡು ದಿನಗಳ ಹಿಂದೆ ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ‌

ಮಧ್ಯಪ್ರದೇಶದ ಒಟ್ಟು ಜನಸಂಖ್ಯೆಯಲ್ಲಿ ಒಬಿಸಿ ಪ್ರಮಾಣ ಶೇ 48ರಷ್ಟಿದೆ. ಆದ್ದರಿಂದ ಬಿಜೆಪಿ ಇಲ್ಲಿ ಮುಖ್ಯಮಂತ್ರಿ ಸ್ಥಾನವನ್ನು ಒಬಿಸಿ ಸಮುದಾಯಕ್ಕೆ ನೀಡುತ್ತಾ ಬಂದಿದೆ. ಚೌಹಾಣ್‌ ಅವರಿಗಿಂತಲೂ ಹಿಂದೆ ಮುಖ್ಯಮಂತ್ರಿ ಆಗಿದ್ದ ಉಮಾ ಭಾರತಿ (2003) ಮತ್ತು ಬಾಬೂಲಾಲ್‌ ಗೌರ್ (2004) ಅವರೂ ಒಬಿಸಿ ವರ್ಗಕ್ಕೆ ಸೇರಿದವರು. 

ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿರುವ ನರೇಂದ್ರ ತೋಮರ್‌, ಬಿಜೆಪಿ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯವರ್ಗಿಯ, ಮಧ್ಯಪ್ರದೇಶ ರಾಜ್ಯ ಘಟಕದ ಅಧ್ಯಕ್ಷ ವಿ.ಡಿ. ಶರ್ಮಾ ಅವರೂ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಗಳಾಗಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.