ADVERTISEMENT

ಡೀಪ್‌ಫೇಕ್‌ಗಳಿಗೆ ಶೀಘ್ರ ನಿಯಂತ್ರಣ: ಅಶ್ವಿನಿ ವೈಷ್ಣವ್‌

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2025, 15:39 IST
Last Updated 18 ಅಕ್ಟೋಬರ್ 2025, 15:39 IST
ಅಶ್ವಿನಿ ವೈಷ್ಣವ್‌, ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ
ಅಶ್ವಿನಿ ವೈಷ್ಣವ್‌, ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ   

ನವದೆಹಲಿ: ಸರ್ಕಾರ ಸದ್ಯದಲ್ಲೇ ಡೀಪ್‌ಫೇಕ್‌ಗಳಿಗೆ ನಿಯಂತ್ರಣ ಹೇರಲಿದೆ ಎಂದು ಮಾಹಿತಿ ತಂತ್ರಜ್ಞಾನ ಮತ್ತು ಎಲೆಕ್ಟ್ರಾನಿಕ್ಸ್‌ ಸಚಿವ ಅಶ್ವಿನಿ ವೈಷ್ಣವ್‌ ಅವರು ಶನಿವಾರ ತಿಳಿಸಿದ್ದಾರೆ.

ಡೀಪ್‌ಫೇಕ್‌ಗಳನ್ನು ತೀಕ್ಷ್ಣವಾಗಿ ಪರಿಶೀಲಿಸಲು ಮತ್ತು ನಿಗಾ ಇಡಲು ತಾಂತ್ರಿಕ ಮತ್ತು ಕಾನೂನು ಸಲಹೆಗಳನ್ನು ಪಡೆಯಲಾಗುತ್ತಿದೆ. ಇದಕ್ಕಾಗಿ ಸರ್ಕಾರ ರೂಪುರೇಷೆಯೊಂದನ್ನು ಸಿದ್ಧಪಡಿಸುತ್ತಿದೆ ಎಂದು ಅವರು ಹೇಳಿದರು.

ಧ್ವನಿ ಮತ್ತು ಮುಖಚರ್ಯೆ ತೋರಿಸಿ ಆ ವ್ಯಕ್ತಿಗೆ ಸಂಬಂಧಿಸದ ವಿಚಾರಗಳನ್ನು ಹರಡುವ ಮೂಲಕ ಹಾನಿ ಉಂಟುಮಾಡುವ ಡೀಪ್‌ಫೇಕ್‌ಗಳಿಂದ ಸಮಾಜವನ್ನು ರಕ್ಷಿಸಬೇಕಿದೆ ಎಂದು ಕಾರ್ಯಕ್ರಮವೊಂದರಲ್ಲಿ ಅವರು ತಿಳಿಸಿದರು.

ADVERTISEMENT

ಹಲವು ಪ್ರಕರಣಗಳಲ್ಲಿ ಕೃತಿಕ ಬುದ್ಧಿಮತ್ತೆಯನ್ನು (ಎಐ) ಸಕಾರಾತ್ಮಕವಾಗಿ ಬಳಸಲಾಗುತ್ತಿದೆ. ಮನರಂಜನೆ, ಹಾಸ್ಯಕ್ಕೆ ಬಳಸಿದರೆ ಪ್ರೋತ್ಸಾಹಿಸಬಹುದು. ಆದರೆ ಇದರಿಂದ ಮತ್ತೊಬ್ಬರಿಗೆ ಹಾನಿಯಾಗಬಾರದು ಎಂದರು.

ಎಐಗಳಿಂದ ಆಗುತ್ತಿರುವ ಹಾನಿಗಳನ್ನು ನಿಯಂತ್ರಿಸಲು 2024ರಲ್ಲೇ ಮಾಹಿತಿ ತಂತ್ರಜ್ಞಾನ ನಿಯಮ–2021ರ ಅಡಿಯಲ್ಲಿ  ಮಾರ್ಗಸೂಚಿ ಹೊರಡಿಸಲಾಗಿದೆ. ಇದೀಗ ಕಠಿಣ ನಿಯಮಗಳನ್ನು ತರುವ ಪ್ರಯತ್ನ ನಡೆದಿದೆ ಎಂದು ತಿಳಿಸಿದರು.


ದೇಶದಲ್ಲಿ 6 ಎ.ಐ ಮಾದರಿಗಳ ಅಭಿವೃದ್ಧಿ:

ದೇಶದಲ್ಲಿ ಕೃತಕ ಬುದ್ಧಿಮತ್ತೆ (ಎಐ) ಅಭಿವೃದ್ಧಿ ಮಾಡುತ್ತಿರುವ ಬಗ್ಗೆಯೂ ಇದೇ ವೇಳೆ ಅಶ್ವಿನಿ ವೈಷ್ಣವ್‌ ಮಾಹಿತಿ ನೀಡಿದರು. ‌‘ಎಐಗಳ ಮೂಲಸೌಲಭ್ಯ ನಿರ್ಮಾಣ ಮತ್ತು ಎರಡು ಸೆಮಿಕಂಡಕ್ಟರ್‌ ಯುನಿಟ್‌ಗಳ ಅಭಿವೃದ್ಧಿಯಲ್ಲಿ ಚಿಪ್‌ಗಳು ಪ್ರಮುಖ ಪಾತ್ರ ವಹಿಸಲಿವೆ. ದೇಶದಲ್ಲಿ ಆರು ಎಐ ಮಾದರಿಗಳು ಅಭಿವೃದ್ಧಿಯಾಗುತ್ತಿವೆ’ ಎಂದರು.

ಆರು ಚಿಪ್‌ಗಳಲ್ಲಿ ಎರಡು ಚಿಪ್ಸ್‌ಗಳ ಉತ್ಪಾದನೆಯನ್ನು ಸಿ.ಜಿ ಸೆಮಿ ಮತ್ತು ಕಾಯ್ನೆಸ್‌ ಘಟಕಗಳು ಈಗಾಗಲೇ ಭಾರತದಲ್ಲಿ ಆರಂಭಿಸಿದೆ.  120 ದಶಲಕ್ಷ ಮಾನದಂಡಗಳನ್ನು ಅನುಸರಿಸಿದ್ದು, ವಿದೇಶಿ ಮಾದರಿಗಳೆಂಬ ಟೀಕೆಯಿಂದ ಮುಕ್ತವಾಗಿರಲಿವೆ ಎಂದು ಹೇಳಿದರು.

 ‘2–ನ್ಯಾನೊಮೀಟರ್‌ಗಳನ್ನು ಒಳಗೊಂಡ ಅತಿ ಸಣ್ಣ, ಸಂಕೀರ್ಣವಾದ ಚಿಪ್‌ಗಳು ವಿನ್ಯಾಸಗೊಳ್ಳುತ್ತಿವೆ. ಇವು ವಿಶ್ವದ ಇತ್ತೀಚಿನ ಸಲಕರಣೆಗಳನ್ನು ಒಳಗೊಂಡ ವಿರಳ ಚಿಪ್‌ಗಳಾಗಿವೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.