ADVERTISEMENT

ದೆಹಲಿಯಲ್ಲಿ ಭಾರಿ ಮಳೆ: ಸಚಿವ ರಾಜನಾಥ ಸಿಂಗ್ ಪ್ರಯಾಣಿಸುತ್ತಿದ್ದ ವಿಮಾನ ಬೇರೆಡೆಗೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 21 ಮೇ 2022, 1:28 IST
Last Updated 21 ಮೇ 2022, 1:28 IST
ದೆಹಲಿಯ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ –ಪಿಟಿಐ ಚಿತ್ರ
ದೆಹಲಿಯ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ –ಪಿಟಿಐ ಚಿತ್ರ   

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿ ಮತ್ತು ಉತ್ತರ ಭಾರತದ ಹಲವೆಡೆ ಗುಡುಗು ಸಹಿತ ಭಾರಿ ಮಳೆಯಾಗಿದೆ.

ಮಳೆಯಿಂದಾಗಿ ದೆಹಲಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿಯಬೇಕಿದ್ದ ಒಟ್ಟು 11 ವಿಮಾನಗಳನ್ನು ಶುಕ್ರವಾರ ಬೇರೆಡೆ ಕಳುಹಿಸಲಾಗಿದೆ.

ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಪ್ರಯಾಣಿಸುತ್ತಿದ್ದ ವಿಮಾನ ದೆಹಲಿಗೆ ಬಂದಿಳಿಯಬೇಕಿತ್ತು. ಹವಾಮಾನ ವೈಪರೀತ್ಯದಿಂದಾಗಿ ಮಾರ್ಗ ಬದಲಾವಣೆ ಮಾಡಲಾಗಿದೆ ಎಂದು ಸುದ್ದಿಸಂಸ್ಥೆ ‘ಎಎನ್‌ಐ’ ವರದಿ ಮಾಡಿದೆ.

ADVERTISEMENT

ದಟ್ಟವಾದ ಮೋಡ ಹಾಗೂ ಮಳೆಯಿಂದಾಗಿ ಕೆಲವು ವಿಮಾನಗಳನ್ನು ಲಖನೌ ಮತ್ತು ಜೈಪುರ ವಿಮಾನ ನಿಲ್ದಾಣಕ್ಕೆ ಕಳುಹಿಸಲಾಯಿತು. ಸದ್ಯ ದೆಹಲಿಯಲ್ಲಿ ವಿಮಾನ ಹಾರಾಟ ಸ್ಥಗಿತಗೊಳಿಸಲಾಗಿದೆ.

ಮಧ್ಯಾಹ್ನದಿಂದ ಸಣ್ಣ ಪ್ರಮಾಣದ ಮಳೆಯಾಗುತ್ತಿತ್ತು. ಸಂಜೆ ವೇಳೆಗೆ ಬಿರುಸು ಪಡೆದುಕೊಂಡ ಮಳೆ ನಿರಂತರವಾಗಿ ಸುರಿಯಿತು.

‘ಹವಾಮಾನ ವೈಪರೀತ್ಯದಿಂದಾಗಿ ದೆಹಲಿ ವಿಮಾನ ನಿಲ್ದಾಣದಲ್ಲಿ ವಿಮಾನಗಳ ಕಾರ್ಯಾಚರಣೆ ಮೇಲೆ ಪರಿಣಾಮ ಬೀರಿದೆ. ಪರಿಷ್ಕೃತ ಮಾಹಿತಿಗಾಗಿ ಸಂಬಂಧಪಟ್ಟ ವಿಮಾನಯಾನ ಸಂಸ್ಥೆಗಳನ್ನು ಸಂಪರ್ಕಿಸಲು ಪ್ರಯಾಣಿಕರಿಗೆ ಮನವಿ ಮಾಡಲಾಗಿದೆ’ ಎಂದು ದೆಹಲಿ ವಿಮಾನ ನಿಲ್ದಾಣವು ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಪೋಸ್ಟ್‌ ಮಾಡಿದೆ.

ದೆಹಲಿಯಲ್ಲಿ ಗರಿಷ್ಠ ಉಷ್ಣಾಂಶವು 49-50 ಡಿಗ್ರಿ ಸೆಲ್ಸಿಯಸ್‌ನಷ್ಟು ದಾಖಲಾಗಿತ್ತು. ಮಳೆಯಾಗಿರುವುದರಿಂದ ಜನರು, ವನ್ಯಜೀವಿಗಳು ನೆಮ್ಮದಿಯ ನಿಟ್ಟುಸಿರು ಬಿಟ್ಟಂತಾಗಿದೆ.

ಮುಂದಿನ ಮೂರು –ನಾಲ್ಕು ದಿನ ಬಿರುಗಾಳಿ, ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.