
ನವದೆಹಲಿ: ಭಾರತದ ಮೂರು ಪಡೆಗಳ ಯುದ್ಧ ಸಾಮರ್ಥ್ಯ ಹೆಚ್ಚಿಸಲು ₹79 ಸಾವಿರ ಕೋಟಿ ಮೌಲ್ಯದ ಮಿಲಿಟರಿ ಹಾರ್ಡ್‌ವೇರ್ ಉಪಕರಣಗಳನ್ನು ಖರೀದಿಸಲು ರಕ್ಷಣಾ ಸಚಿವ ರಾಜನಾಥ್ ಸಿಂಗ್ ನೇತೃತ್ವದ ರಕ್ಷಣಾ ಖರೀದಿ ಮಂಡಳಿ (ಡಿಎಸಿ) ಸೋಮವಾರ ಅನುಮೋದನೆ ನೀಡಿದೆ.
ದೀರ್ಘ ಶ್ರೇಣಿಯ ರಾಕೆಟ್‌ಗಳು, ಕ್ಷಿಪಣಿಗಳು, ರೇಡಾರ್ ವ್ಯವಸ್ಥೆಗಳು, ಶಸ್ತ್ರಾಸ್ತ್ರ ಸೇರಿದಂತೆ ವಿವಿಧ ಯುದ್ಧೋಪಕರಣಗಳನ್ನು ಖರೀದಿಸಲು ಉದ್ದೇಶಿಸಲಾಗಿದೆ.
ಭಾರತೀಯ ಸೇನೆಗಾಗಿ ಹಗುರವಾದ ರೇಡಾರ್‌ಗಳು, ಪಿನಾಕಾ ರಾಕೆಟ್ ವ್ಯವಸ್ಥೆಯ ವ್ಯಾಪ್ತಿ ಮತ್ತು ನಿಖರತೆ ಹೆಚ್ಚಳಕ್ಕಾಗಿ ದೀರ್ಘ ವ್ಯಾಪ್ತಿಯ ಗುರಿ ನಿರ್ದೇಶಿತ ರಾಕೆಟ್‌ಗಳನ್ನು (ಎಂಕೆ–2) ಖರೀದಿಸಲಾಗುತ್ತದೆ.
ನೌಕಾಪಡೆಗಾಗಿ ತಂತ್ರಾಂಶದ ಮೂಲಕ ನಿಯಂತ್ರಿಸುವ ಆಧುನಿಕ ರೇಡಿಯೊ ಸಾಧನಗಳು ಮತ್ತು ಅತಿ ಎತ್ತರದಲ್ಲಿ ದೀರ್ಘಕಾಲ ಹಾರಬಲ್ಲ ರಿಮೋಟ್ ಚಾಲಿತ ಡ್ರೋನ್‌ಗಳನ್ನು ಪಡೆಯಲು ನಿರ್ಧರಿಸಲಾಗಿದೆ. ಹಿಂದೂ ಮಹಾಸಾಗರದ ಮೇಲೆ ನಿರಂತರವಾಗಿ ಕಣ್ಗಾವಲು ಇಡಲು ಮತ್ತು ಶತ್ರುಸೈನ್ಯದ ಕುರಿತ ಮಾಹಿತಿ ಸಂಗ್ರಹಿಸಲು ಈ ಡ್ರೋನ್‌ಗಳು ಸಹಕಾರಿಯಾಗಿವೆ.
ವಾಯುಪಡೆಗಾಗಿ ಟೇಕಾಫ್ ಮತ್ತು ಲ್ಯಾಂಡಿಂಗ್‌ನ ಸ್ವಯಂಚಾಲಿತ ದಾಖಲಾತಿ ವ್ಯವಸ್ಥೆ, ಅಸ್ತ್ರ ಎಂಕೆ–2 ಕ್ಷಿಪಣಿಗಳು ಮತ್ತು ಇತರ ಸಾಧನಗಳನ್ನು ಖರೀದಿಸಲು ಒಪ್ಪಿಗೆ ನೀಡಲಾಗಿದೆ. ನೈಜ ಯುದ್ಧದ ಅನುಭವ ನೀಡುವ ತರಬೇತಿ ಸಾಧನ (ಫುಲ್ ಮಿಷನ್ ಸಿಮ್ಯುಲೇಟರ್), ಸ್ಪೈಸ್–1000 ದೀರ್ಘ ಶ್ರೇಣಿಯ ಮಾರ್ಗದರ್ಶಿತ ಕಿಟ್‌ಗಳ (ಇದು ಸಾಮಾನ್ಯ ಬಾಂಬ್‌ಗಳನ್ನು ಸ್ಮಾರ್ಟ್ ಬಾಂಬ್‌ಗಳನ್ನಾಗಿ ಪರಿವರ್ತಿಸುವ ತಂತ್ರಜ್ಞಾನವಾಗಿದೆ. ಈ ಕಿಟ್ ಅನ್ನು ಬಾಂಬ್‌ಗೆ ಅಳವಡಿಸಿದಾಗ ಅದು ಜಿಪಿಎಸ್ ಅಥವಾ ಲೇಸರ್ ಸಹಾಯದಿಂದ ಶತ್ರುಗಳ ಅಡಗುದಾಣವನ್ನು ನಿಖರವಾಗಿ ಹುಡುಕಿಕೊಂಡು ಹೋಗಿ ದಾಳಿ ಮಾಡುತ್ತದೆ) ಖರೀದಿಗೂ ಅನುಮೋದನೆ ನೀಡಲಾಗಿದೆ ಎಂದು ರಕ್ಷಣಾ ಸಚಿವಾಲಯ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.