ವಾಯು ಮಾಲಿನ್ಯದಿಂದಾಗಿ ದೆಹಲಿಯ ಇಂಡಿಯಾ ಗೇಟ್ ಮಬ್ಬಾಗಿ ಕಾಣಿಸುತ್ತಿರುವುದು
–ಪಿಟಿಐ ಚಿತ್ರ
ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ವಾಯುಮಾಲಿನ್ಯ ಗುಣಮಟ್ಟ ‘ಕಳಪೆ’ಯಲ್ಲೇ ಮುಂದುವರಿದಿದ್ದು, ವಾಯು ಶುದ್ಧೀಕರಣ ಪರಿಕರ ಹಾಗೂ ಮಾಸ್ಕ್‌ಗಳಿಗೆ ಬೇಡಿಕೆ ಶೇ 60–70ರಷ್ಟು ಹೆಚ್ಚಳವಾಗಿದೆ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ.
ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ದತ್ತಾಂಶ ಪ್ರಕಾರ ದೆಹಲಿಯಲ್ಲಿ ಬುಧವಾರ ಗಾಳಿ ಗುಣಮಟ್ಟ ಸೂಚ್ಯಂಕ 354 ದಾಖಲಾಗಿದೆ. ಇದು ಈ ಋತುವಿನಲ್ಲೇ ಅಧಿಕ. ಮಂಗಳವಾರ 351 ಎಕ್ಯೂಐ ಹಾಗೂ ಸೋಮವಾರ 345 ಎಕ್ಯೂಐ ದಾಖಲಾಗಿತ್ತು.
ಅಕ್ಟೋಬರ್ ತಿಂಗಳ ಆರಂಭದಲ್ಲಿ ಗಾಳಿಯ ಗುಣಮಟ್ಟ ಇಳಿಕೆಯಾಗಲು ಪ್ರಾರಂಭಿಸಿದ್ದು, ನಗರದ ಎಲೆಕ್ಟ್ರಾನಿಕ್ಸ್ ಅಂಗಡಿಗಳಲ್ಲಿ ವಾಯು ಶುದ್ಧೀಕರಣ ಪರಿಕರಗಳಿಗೆ ಬೇಡಿಕೆ ಹೆಚ್ಚಳವಾಗಿದೆ.
‘ನಿತ್ಯ ಎರಡರಿಂದ ಮೂರು ಗ್ರಾಹಕರು ವಾಯು ಶುದ್ಧೀಕರಣ ಪರಿಕರಗಳನ್ನು ಖರೀದಿಸುತ್ತಿದ್ದಾರೆ. ದಿನಕ್ಕೆ ಮಾಹಿತಿ ಬಯಸಿ ಸುಮಾರು 20 ಕರೆಗಳು ಬರುತ್ತದೆ. ಅವುಗಳ ಮಾರಾಟ ಶೇ 60–70ರಷ್ಟು ಏರಿಕೆಯಾಗಿದೆ’ ಎಂದು ಕೊನ್ನಾಗುಟ್‌ನ ಕ್ರೋಮಾ ಒಡೆನ್‌ನ ಮಾರಾಟ ಸಿಬ್ಬಂದಿಯೊಬ್ಬರು ಹೇಳಿದ್ದಾರೆ.
=‘ಈ ಹಿಂದೆ ನಾವು 10 ಘಟಕಗಳನ್ನು ಮಾರಾಟ ಮಾಡಲು ಒಂದು ವಾರದಿಂದ ಒಂದು ತಿಂಗಳು ಬೇಕಿತ್ತು. ಈಗ ಎರಡ್ಮೂರು ದಿನಗಳಲ್ಲಿ 35–40 ಘಟಕಗಳು ಮಾರಾಟವಾಗುತ್ತಿವೆ’ ಎಂದು ಇಂದಿರಾಪುರದಲ್ಲಿರುವ ಏರ್ ಎಕ್ಸ್‌ಪರ್ಟ್ ಇಂಡಿಯಾದ ಮಾಲೀಕ ವಿಜೇಂದ್ರ ಮೋಹನ್ ಹೇಳಿದ್ದಾರೆ.
ಈ ವಾರದಲ್ಲಿ ಬೇಡಿಕೆ ಭಾರಿ ಪ್ರಮಾಣದಲ್ಲಿ ಹೆಚ್ಚಿದ್ದು, ದಿನಕ್ಕೆ 150ಕ್ಕೂ ಅಧಿಕ ಕರೆಗಳು ಬರುತ್ತಿವೆ’ ಎಂದು ಹೇಳಿದ್ದಾರೆ.
‘ಆನ್‌ಲೈನ್ ಹಾಗೂ ಆಫ್‌ಲೈನ್‌ನಲ್ಲಿ ಮಾರಾಟ ಶೇ 60ರಷ್ಟು ಏರಿಕೆಯಾಗಿದೆ. ಅಕ್ಟೋಬರ್ ತಿಂಗಳ ಮಧ್ಯದಿಂದ ಜನ ನಮ್ಮಲ್ಲಿಗೆ ಬರುತ್ತಲೇ ಇದ್ದಾರೆ. ಬೇಡಿಕೆ ಪೂರೈಸಲು ನಮ್ಮ ದಾಸ್ತಾನನ್ನು ಏರಿಕೆ ಮಾಡಿದ್ದೇವೆ’ ಎಂದು ರಾಜಾ ಗಾರ್ಡನ್‌ನಲ್ಲಿರುವ ಮಹಾಜನ್ ಎಲೆಕ್ಟ್ರಾನಿಕ್ಸ್‌ನ ಸಿಬ್ಬಂದಿ ತಿಳಿಸಿದ್ದಾರೆ.
ನಗರದಲ್ಲಿ ಮಾಸ್ಕ್‌ಗಳಿಗೆ ಕೂಡ ಬೇಡಿಕೆ ಹೆಚ್ಚಿದೆ. ‘ಕಳೆದೆರಡು ವಾರಗಳಿಂದ ಮಾಸ್ಕ್ ಮಾರಾಟ ಶೇ 40ರಷ್ಟು ಏರಿಕೆಯಾಗಿದೆ. ಬಹುತೇಕರು ಸಾಮಾನ್ಯ ಮಾಸ್ಕ್ ಅನ್ನೇ ಖರೀದಿಸುತ್ತಿದ್ದಾರೆ’ ಎಂದು ಕೊನೌಟ್ ಪ್ರದೇಶದಲ್ಲಿರುವ ಅಪೋಲೊ ಫಾರ್ಮಸಿಯ ರಾಜೀವ್ ಕುಮಾರ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.