ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2
ರಾಯಿಟರ್ಸ್ ಚಿತ್ರ
ನವದೆಹಲಿ: ದೆಹಲಿಯ ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್–2 ಅನ್ನು ನವೀಕರಣ ಕಾರ್ಯಗಳಿಗಾಗಿ ಏಪ್ರಿಲ್‌ನಿಂದ 4 ರಿಂದ ಆರು ತಿಂಗಳವರೆಗೆ ಮುಚ್ಚಲಾಗುವುದು ಎಂದು ದೆಹಲಿ ಇಂಟರ್‌ನ್ಯಾಶನಲ್ ಏರ್‌ಪೋರ್ಟ್ ಲಿಮಿಟೆಡ್ (DIAL) ತಿಳಿಸಿದೆ.
ದೆಹಲಿ ವಿಮಾನ ನಿಲ್ದಾಣವು ದೇಶದ ಅತ್ಯಂತ ಜನನಿಬಿಡ ವಿಮಾನ ನಿಲ್ದಾಣವಾಗಿದ್ದು, ಮೂರು ಟರ್ಮಿನಲ್‌ಗಳನ್ನು ಹೊಂದಿದೆ. ಪ್ರಸ್ತುತ ಟರ್ಮಿನಲ್ 1 ಮತ್ತು 2 ಅನ್ನು ದೇಶೀಯ ವಿಮಾನಯಾನಕ್ಕೆ ಬಳಸಲಾಗುತ್ತಿದೆ.
ನವೀಕರಣ ಕಾರ್ಯಗಳಿಗಾಗಿ ದೆಹಲಿ ವಿಮಾನ ನಿಲ್ದಾಣ ಟರ್ಮಿನಲ್ 2 ಏಪ್ರಿಲ್‌ನಿಂದ ನಾಲ್ಕರಿಂದ ಆರು ತಿಂಗಳುಗಳವರೆಗೆ ತಾತ್ಕಾಲಿಕ ಸ್ಥಗಿತಗೊಳ್ಳಲಿದೆ. ನವೀಕರಣ ಕಾರ್ಯಗಳು ಸೆಪ್ಟೆಂಬರ್‌ನಲ್ಲಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ ಎಂದು ಪ್ರಕಟಣೆ ತಿಳಿಸಿದೆ.
ಈ ಕುರಿತು ಮಾತನಾಡಿದ DIAL ಸಿಇಒ ವಿದೇಹ್ ಕುಮಾರ್ ಜೈಪುರಿಯಾರ್, ‘ನಾಲ್ಕು ದಶಕಗಳಷ್ಟು ಹಳೆಯದಾದ ಟರ್ಮಿನಲ್ 2 ನವೀಕರಿಸುವುದು ಇಂದಿನ ಅಗತ್ಯವಾಗಿದೆ. ಪ್ರಮುಖ ಮೂಲಸೌಕರ್ಯಗಳ ನವೀಕರಣ, ಕಾರ್ಯಾಚರಣೆಯ ದಕ್ಷತೆ ಸುಧಾರಣೆ ಮತ್ತು ಪ್ರಯಾಣಿಕರ ಸೌಕರ್ಯ ಹೆಚ್ಚಿಸುವ ಮೂಲಕ ಒಟ್ಟಾರೆ ಪ್ರಯಾಣಿಕರ ಅನುಭವವನ್ನು ಉತ್ತಮಗೊಳಿಸಲು ಆದತ್ಯೆ ನೀಡಲಾಗುವುದು’ ಎಂದು ಹೇಳಿದ್ದಾರೆ.
ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವು ಪ್ರತಿದಿನ ಸುಮಾರು 1,300 ವಿಮಾನ ಸಂಚಾರಗಳನ್ನು ಕಾರ್ಯಾಚರಿಸುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.