ನವದೆಹಲಿ: ಎಎಪಿ ನನ್ನ ವಿರುದ್ಧ ಇಲ್ಲಸಲ್ಲದ ಸುಳ್ಳು ಆರೋಪ ಮಾಡುತ್ತಿದ್ದು, ಆಮರಣಾಂತ ಉಪವಾಸ ಮಾಡುವುದಾಗಿ ಬಿಜೆಪಿ ನಾಯಕ ಶೆಹಜಾದ್ ಪೂನಾವಾಲಾ ಘೋಷಿಸಿದ್ದಾರೆ.
ಈ ಕುರಿತಂತೆ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, ‘ಪ್ರೀತಿಯ ಸ್ನೇಹಿತರೇ, ನಾನು ಸತ್ತರೆ ಆಮ್ ಆದ್ಮಿ ಪಕ್ಷ ಅದಕ್ಕೆ ಜವಾಬ್ದಾರಿಯಾಗಿರುತ್ತೆ. ಎಎಪಿ ನನ್ನ ವಿರುದ್ಧ ಸುಳ್ಳುಗಳನ್ನು ಹರಡಿದ್ದು, ನನ್ನ ತೇಜೋವಧೆ ಮಾಡಿದೆ. ನಾನು ಯಾರನ್ನಾದರೂ ನಿಂದಿಸಿದ್ದೇನೆ ಎಂಬುದನ್ನು ಎಎಪಿ ಸಾಬೀತುಮಾಡುವವರೆಗೂ ಆಮರಣಾಂತ ಉಪವಾಸ ಮಾಡುತ್ತೇನೆ’ ಎಂದು ಬರೆದುಕೊಂಡಿದ್ದಾರೆ.
ಸ್ನೇಹಿತರೇ, ನಾನು ಇಂದು ರಾತ್ರಿ ನಿಮ್ಮೊಂದಿಗೆ ಮಾತನಾಡಲು ಕಾರಣವೇನೆಂದರೆ, ಎಎಪಿ ಪಕ್ಷವು ನಾನು ರುತುರಾಜ್ ಝಾ ವಿರುದ್ಧ ಅಸಭ್ಯ ಭಾಷೆ ಬಳಸಿದ್ದೇನೆ ಎಂದು ಎಡಿಟ್ ಮಾಡಿದ 5 ಸೆಕೆಂಡಿನ ವಿಡಿಯೊ ಮೂಲಕ ಅಪಪ್ರಚಾರ ಮಾಡುತ್ತಿದೆ ಎಂದಿರುವ ಅವರು, ನಂತರ ಎಎಪಿ ತನ್ನ ಅಧಿಕೃತ ಎಕ್ಸ್ ಹ್ಯಾಂಡಲ್‌ನಲ್ಲಿ ಪೋಸ್ಟ್ ಮಾಡಿರುವ ವಿಡಿಯೊವನ್ನು ಪ್ರದರ್ಶಿಸಿದ್ದಾರೆ.
ವಿಡಿಯೊ ಚಿತ್ರೀಕರಣದ ಸಂದರ್ಭವನ್ನು ವಿವರಿಸಿರುವ ಅವರು, ನಾನು ಮುಸ್ಲಿಂ ಎಂಬ ಕಾರಣಕ್ಕೆ ಎಎಪಿ ನನ್ನನ್ನು ಗುರಿಯಾಗಿಸಿಕೊಂಡಿದೆ ಎಂದು ಆರೋಪಿಸಿದ್ದಾರೆ. ಟಿವಿ ಚರ್ಚೆಯ ಸಮಯದಲ್ಲಿ ಚಿತ್ರೀಕರಣವಾದ ವಿಡಿಯೊ ಇದಾಗಿದ್ದು, ಅದನ್ನು ಎಡಿಟ್ ಮಾಡಿ ಅಪಪ್ರಚಾರ ಮಾಡಲಾಗುತ್ತಿದೆ ಎಂದಿರುವ ಅವರು, ಚರ್ಚೆಯ ಸಮಯದಲ್ಲಿ ಹಾಜರಿದ್ದ ಪತ್ರಕರ್ತ ಮತ್ತು ನಿರೂಪಕರನ್ನು ಸಾಕ್ಷಿಗಳಾಗಿ ಉಲ್ಲೇಖಿಸಿದ್ದಾರೆ.
ಎಎಪಿ ತನ್ನ ವಿರುದ್ಧ ಸಂಕಥನ ರಚಿಸುತ್ತದೆ. ಆ ಪಕ್ಷದ ಹಿರಿಯ ನಾಯಕರೇ ಕ್ಲಿಪ್ ಅನ್ನು ಹಂಚಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
‘ನಾನು ಈಗ ಊಟ ಮಾಡುವುದನ್ನು ನಿಲ್ಲಿಸುತ್ತೇನೆ. ಎಎಪಿ ಕಚೇರಿಯ ಮುಂದೆ ಮಲಗಲಿದ್ದೇನೆ. ಒಂದೋ ಎಎಪಿ ನನ್ನ ವಿರುದ್ಧದ ಆರೋಪ ಸಾಬೀತುಪಡಿಸಬೇಕು, ಅಥವಾ ಅವರು ನನ್ನಲ್ಲಿ ಕ್ಷಮೆ ಕೇಳಬೇಕು. ಏಕೆಂದರೆ, ಇದು ನನ್ನ, ಕುಟುಂಬ ಮತ್ತು ನನ್ನ ಸಮುದಾಯದ ಮರ್ಯಾದೆಗೆ ಸಂಬಂಧಿಸಿದ ವಿಚಾರ’ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.