ನವದೆಹಲಿ: ದೆಹಲಿ ವಿಧಾನಸಭಾ ಚುನಾವಣೆಗೆ ಬಿಜೆಪಿಯು 29 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಶನಿವಾರ ಪ್ರಕಟಿಸಿದೆ. ಎಎಪಿ ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ಹಾಗೂ ಮುಖ್ಯಮಂತ್ರಿ ಆತಿಶಿ ವಿರುದ್ಧ ಮಾಜಿ ಸಂಸದರಾದ ಪರ್ವೇಶ್ ವರ್ಮಾ ಹಾಗೂ ರಮೇಶ್ ಬಿಧೂಢಿ ಅವರನ್ನು ಕಣಕ್ಕಿಳಿಸಿದೆ. ಪಕ್ಷಾಂತರಿಗಳಿಗೆ ಮೊದಲ ಪಟ್ಟಿಯಲ್ಲಿ ಮಣೆ ಹಾಕಲಾಗಿದೆ.
ಕಾಂಗ್ರೆಸ್‌ನಿಂದ 2022ರಲ್ಲಿ ಬಿಜೆಪಿಗೆ ಜಿಗಿದಿರುವ ಹಿರಿಯ ನಾಯಕ ತರ್ವಿಂದರ್ ಸಿಂಗ್ ಮರ್ವಾಹ್ ಅವರು ಮಾಜಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರನ್ನು ಎದುರಿಸಲಿದ್ದಾರೆ.
ಎಎಪಿಯ ಪ್ರಮುಖ ನಾಯಕರು ಸ್ಪರ್ಧಿಸುತ್ತಿರುವ ನವದೆಹಲಿ, ಕಲ್ಕಾಜಿ ಮತ್ತು ಜಂಗ್‌ಪುರ ಕ್ಷೇತ್ರಗಳಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳು ಹಿರಿಯ ಹಾಗೂ ಪ್ರಬಲ ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ.
ಕಳೆದ ಚುನಾವಣೆಯಲ್ಲಿ ಬಿಜೆಪಿ ಎಂಟು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು. ಈ ಪೈಕಿ, ಏಳು ಶಾಸಕರಿಗೆ ಈ ಸಲ ಟಿಕೆಟ್ ನೀಡಲಾಗಿದೆ. ಲೋಕಸಭಾ ಚುನಾವಣಾ ಸಂದರ್ಭದಲ್ಲಿ ಪಕ್ಷಕ್ಕೆ ಸೇರಿದ್ದ ದೆಹಲಿ ಕಾಂಗ್ರೆಸ್ ಘಟಕದ ಮಾಜಿ ಅಧ್ಯಕ್ಷ ಅರವಿಂದರ್ ಸಿಂಗ್ ಲವ್ಲಿ ಅವರಿಗೆ ಅವಕಾಶ ನೀಡುವ ಸಲುವಾಗಿ ಶಾಸಕರೊಬ್ಬರಿಗೆ ಟಿಕೆಟ್ ನಿರಾಕರಿಸಲಾಗಿದೆ. ಈ ಹಿಂದೆ ಶಾಸಕರಾಗಿದ್ದ ರಾಮ್‌ವೀರ್ ಸಿಂಗ್ ಬಿಧೂಢಿ ಅವರು ಸಂಸದರಾಗಿ ಆಯ್ಕೆಯಾಗಿದ್ದರು. ಅವರು ಪ್ರತಿನಿಧಿಸಿದ್ದ ಕ್ಷೇತ್ರದಲ್ಲಿ ಬೇರೆಯವರಿಗೆ ಅವಕಾಶ ನೀಡಲಾಗಿದೆ. ರೋಹಿಣಿ ಕ್ಷೇತ್ರದಿಂದ ವಿಪಕ್ಷ ನಾಯಕ ವಿಜೆಂದರ್ ಗುಪ್ತ ಮತ್ತೆ ಕಣಕ್ಕಿಳಿಯಲಿದ್ದಾರೆ.
ಪಕ್ಷಾಂತರಿಗಳಿಗೆ ಆದ್ಯತೆ: ಎಎಪಿಯಿಂದ ಬಂದಿರುವ ಮಾಜಿ ಸಚಿವ ಕೈಲಾಶ್ ಗೆಹಲೋತ್ ಅವರು ಬಿಜ್ವಾಸನ್ ಕ್ಷೇತ್ರದಿಂದ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಎಎಪಿಯಿಂದ ಬಂದಿರುವ ರಾಜ್ ಕುಮಾರ್ ಆನಂದ್ ಅವರು ಪಟೇಲ್ ನಗರದಿಂದ ಹಾಗೂ ಕರ್ತಾರ್ ಸಿಂಗ್ ತನ್ವರ್ ಅವರು ಕಳೆದ ಬಾರಿ ಗೆದ್ದಿದ್ದ ಚತ್ತರ್‌ಪುರದಿಂದ ಕಣಕ್ಕಿಳಿದಿದ್ದಾರೆ.
ಲವ್ಲಿ ಜೊತೆಗೆ ಬಿಜೆಪಿ ಸೇರಿದ್ದ ಕಾಂಗ್ರೆಸ್‌ನ ರಾಜ್‌ಕುಮಾರ್ ಚೌಹಾಣ್ ಅವರು ಈ ಹಿಂದೆ ಗೆದ್ದಿದ್ದ ಮಂಗೋಲ್‌ಪುರಿ ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ. 2013ರಿಂದ ಈ ಕ್ಷೇತ್ರ ಎಎಪಿ ತೆಕ್ಕೆಯಲ್ಲಿದೆ.
ದ್ವೇಷಭಾಷಣ ಮಾಡಿದವರಿಗೆ ಟಿಕೆಟ್
ಪರ್ವೇಶ್ ವರ್ಮಾ ಹಾಗೂ ರಮೇಶ್ ಬಿಧೂಢಿ ಅವರು 10 ವರ್ಷಗಳ ಕಾಲ ಪಶ್ಚಿಮ ದೆಹಲಿ ಮತ್ತು ದಕ್ಷಿಣ ದೆಹಲಿ ಕ್ಷೇತ್ರಗಳ ಸಂಸದರಾಗಿದ್ದರು. 2024ರ ಲೋಕಸಭಾ ಚುನಾವಣೆಯಲ್ಲಿ ಇಬ್ಬರಿಗೂ ಟಿಕೆಟ್ ನಿರಾಕರಿಸಲಾಗಿತ್ತು. ಇಬ್ಬರೂ ನಾಯಕರು ದ್ವೇಷ ಭಾಷಣದಿಂದಲೇ ಹೆಚ್ಚು ಸುದ್ದಿಯಲ್ಲಿದ್ದವರು.
ನವದೆಹಲಿ ಕ್ಷೇತ್ರದ ಮತದಾರರಿಗೆ ಹಣ ಹಂಚಿದ ಆರೋಪಕ್ಕೆ ವರ್ಮಾ ಇತ್ತೀಚೆಗೆ ತುತ್ತಾಗಿದ್ದರು. 2020ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಅವರು ದ್ವೇಷ ಭಾಷಣಗಳನ್ನು ಮಾಡಿದ್ದರು. ಶಾಹೀನ್ ಬಾಗ್ ಪ್ರತಿಭಟನಾನಿರತರನ್ನು ಅತ್ಯಾಚಾರಿಗಳು ಹಾಗೂ ಕೊಲೆಗಾರರು ಎಂದು ಜರಿದಿದ್ದರು. ಕೇಜ್ರಿವಾಲ್ ಅವರನ್ನು ಭಯೋತ್ಪಾದಕ ಎಂದು ನಿಂದಿಸಿದ್ದರು. ಮುಸ್ಲಿಮರನ್ನು ಸಂಪೂರ್ಣವಾಗಿ ಬಹಿಷ್ಕರಿಸಬೇಕು ಎಂದು 2022ರಲ್ಲಿ ಹೇಳಿಕೆ ನೀಡಿದ್ದರು. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಇಂದಿರಾ ಗಾಂಧಿ ಅವರಿಗಾದ ಗತಿಯೇ ಆಗಲಿದೆ ಎಂದು ತರ್ವಿಂದರ್ ಸಿಂಗ್ ಮರ್ವಾಹ್ ಹೇಳಿದ್ದರು.
ರಮೇಶ್ ಬಿಧೂಢಿ ಅವರು ಸಂಸತ್ತಿನಲ್ಲಿಯೇ ಕೋಮು ದ್ವೇಷದ ಮಾತುಗಳನ್ನು ಆಡಿದ್ದರು. 2023ರಲ್ಲಿ ಲೋಕಸಭೆಯ ಚಳಿಗಾಲದ ಅಧಿವೇಶನದಲ್ಲಿ ಬಿಎಸ್‌ಪಿ ಸಂಸದ ಡ್ಯಾನಿಶ್ ಅಲಿ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ್ದರು.
ಪಾಲಿಕೆ ಸದಸ್ಯ ರವಿಂದರ್ ಸಿಂಗ್ ನೇಗಿ ಅವರನ್ನು ಪಕ್ಷ ಹುರಿಯಾಳುವನ್ನಾಗಿ ಮಾಡಿದೆ. ಮಾರುಕಟ್ಟೆಯಲ್ಲಿ ಮುಸ್ಲಿಂ ವ್ಯಾಪಾರಿಗಳು ತಮ್ಮ ಹೆಸರುಗಳನ್ನು ಪ್ರದರ್ಶಿಸಬೇಕು ಎಂದು ನೇಗಿ ಹೇಳಿಕೆ ನೀಡಿದ್ದರು.
ಪ್ರಮುಖ ಕ್ಷೇತ್ರಗಳ ಹಣಾಹಣಿ
ನವದೆಹಲಿ ಕ್ಷೇತ್ರ
ಅರವಿಂದ ಕೇಜ್ರಿವಾಲ್ (ಎಎಪಿ)
ಸಂದೀಪ್ ದೀಕ್ಷಿತ್ (ಕಾಂಗ್ರೆಸ್)
ಪರ್ವೇಶ್ ವರ್ಮಾ (ಬಿಜೆಪಿ)
ಕಲ್ಕಾಜಿ
ಅತಿಶಿ (ಎಎಪಿ)
ಅಲ್ಕಾ ಲಂಬಾ (ಕಾಂಗ್ರೆಸ್)
ರಮೇಶ್ ಬಿಧೂಢಿ (ಬಿಜೆಪಿ)
ಜಂಗ್‌ಪುರ
ಮನೀಷ್ ಸಿಸೋಡಿಯಾ (ಎಎಪಿ)
ಫರ್ಹಾದ್ ಸೂರಿ (ಕಾಂಗ್ರೆಸ್)
ತರ್ವಿಂದರ್ ಸಿಂಗ್ ಮರ್ವಾಹ್ (ಬಿಜೆಪಿ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.