
ದೆಹಲಿ ಸ್ಫೋಟ
(ಪಿಟಿಐ ಚಿತ್ರ)
ದೆಹಲಿ: 'ದೆಹಲಿ ಸ್ಫೋಟಕ್ಕೆ ಕಾರಣರಾದವರನ್ನು ಸುಮ್ಮನೆ ಬಿಡುವುದಿಲ್ಲ' ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ ಸಿಂಗ್ ಇಂದು (ಮಂಗಳವಾರ) ಹೇಳಿದ್ದಾರೆ.
ದೆಹಲಿಯ ಕೆಂಪುಕೋಟೆ ಮೆಟ್ರೊ ನಿಲ್ದಾಣದ ಟ್ರಾಫಿಕ್ ಸಿಗ್ನಲ್ ಬಳಿ ಸೋಮವಾರ ಸಂಜೆ ಸಂಭವಿಸಿದ್ದ ಕಾರು ಸ್ಫೋಟದಲ್ಲಿ 12 ಮಂದಿ ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದರು.
'ದೆಹಲಿ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾ ಸಂಸ್ಥೆಗಳು ತ್ವರಿತ ಹಾಗೂ ಸಮಗ್ರ ತನಿಖೆ ನಡೆಸುತ್ತಿವೆ' ಎಂದು ರಾಜನಾಥ ಸಿಂಗ್ ಹೇಳಿದ್ದಾರೆ.
ಈ ಸ್ಫೋಟದ ಹಿಂದಿನ ಕಾರಣಕ್ಕೆ ಸಂಬಂಧಿಸಿದಂತೆ ಇನ್ನಷ್ಟೇ ಅಧಿಕೃತ ಮಾಹಿತಿ ಲಭ್ಯವಾಗಬೇಕಿದೆ.
'ತನಿಖೆಯ ವಿವರಗಳನ್ನು ಬೇಗನೇ ಬಹಿರಂಗಪಡಿಸಲಾಗುವುದು. ಸ್ಫೋಟಕ್ಕೆ ಕಾರಣರಾದವರನ್ನು ನ್ಯಾಯಾಲಯದ ಕಟಕಟೆಗೆ ತರಲಾಗುವುದು. ಯಾವ ಕಾರಣಕ್ಕೂ ಬಿಡಲಾಗುವುದಿಲ್ಲ ಎಂದು ನಾನು ದೇಶದ ಜನತೆಗೆ ಭರವಸೆ ನೀಡಲು ಬಯಸುತ್ತೇನೆ' ಎಂದು ರಾಜನಾಥ ಹೇಳಿದ್ದಾರೆ.
ಈ ಸಂದರ್ಭದಲ್ಲಿ ಸ್ಫೋಟದಲ್ಲಿ ಮೃತಪಟ್ಟವರಿಗೆ ರಕ್ಷಣಾ ಸಚಿವರು ಸಂತಾಪ ಸೂಚಿಸಿದ್ದಾರೆ. 'ಈ ಕಠಿಣ ಸಮಯದಲ್ಲಿ ಮೃತರ ಕುಟುಂಬದವರಿಗೆ ದುಃಖವನ್ನು ಭರಿಸುವ ಶಕ್ತಿ ದೇವರು ದಯಪಾಲಿಸಲಿ' ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.